ADVERTISEMENT

‌ಚಿನ್ನಾಭರಣ ಕಳ್ಳತನ: ಮನೆ ಕೆಲಸದಾಕೆಯ ಸೆರೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:07 IST
Last Updated 12 ನವೆಂಬರ್ 2024, 16:07 IST
<div class="paragraphs"><p>ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)</p></div>

ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಯುವತಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯ ನಿವಾಸಿ ಸೋನಿಯಾ(25) ಬಂಧಿತೆ.

ADVERTISEMENT

ಆರೋಪಿಯಿಂದ ₹12 ಲಕ್ಷ ಮೌಲ್ಯದ 108 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಕೋಣನಕುಂಟೆಯ ಅಂಜನಾದ್ರಿ ಬಡಾವಣೆಯ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಭಾವನಾ ಫಣೀಂದ್ರ ಅವರು ಕುಟುಂಬಸ್ಥರ ಜತೆಗೆ ವಾಸವಿದ್ದರು. ಆ ಫ್ಲ್ಯಾಟ್‌ನಲ್ಲಿ ಚಿನ್ನಾಭರಣ ಕಳವು ನಡೆದಿತ್ತು. ಮಾಲೀಕರು ನೀಡಿದ ದೂರು ಆಧರಿಸಿ ಆರೋ‍ಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಭಾವನಾ ಅವರ ಅತ್ತೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನೋಡಿಕೊಳ್ಳಲು ಸೋನಿಯಾ ಅವರನ್ನು ನೇಮಿಸಿಕೊಂಡಿದ್ದರು. ಅಕ್ಟೋಬರ್‌ 7ರಂದು ಮನೆಯವರು ದೇವರ ವೃತ ಆಚರಿಸಿದ ಬಳಿಕ ಚಿನ್ನಾಭರಣವನ್ನು ಕೊಠಡಿಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದರು. ಆ ಚಿನ್ನವನ್ನು ಸೋನಿಯಾ ಕಳವು ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

ವಿದೇಶಿ ಪ್ರಜೆಗಳ ಮೇಲೆ ಹಲ್ಲೆ: ವಿದೇಶಿ ಪ್ರಜೆಗಳಿದ್ದ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಆರೋಪದಡಿ ಭರತ್, ಗಯಾಜ್, ಅಭಿಷೇಕ್ ಹಾಗೂ ಶ್ರೇಯಸ್ ಎಂಬುವರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ, 11 ಗ್ರಾಂ. ಚಿನ್ನದ ಸರ, ಮೂರು ಐ–ಫೋನ್‌ಗಳ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಅಕ್ಟೋಬರ್ 27ರಂದು ರಾತ್ರಿ ಬಾಗಲಗುಂಟೆ ಠಾಣೆ ವ್ಯಾಪ್ತಿಯ ದೊರೆಸಾನಿ ಪಾಳ್ಯದಲ್ಲಿ ಆಫ್ರಿಕಾ ಪ್ರಜೆಗಳು ವಾಸವಿದ್ದ ಮನೆಗೆ ನುಗ್ಗಿದ್ದ ಆರೋಪಿಗಳು, ಚಾಕು ತೋರಿಸಿ, ಹಣ, ಐ–ಫೋನ್‌ ಕೊಡುವಂತೆ ಬೆದರಿಸಿದ್ದರು. ನಿರಾಕರಿಸಿದಾಗ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಐ–ಫೋನ್‌ಗಳು, 11 ಗ್ರಾಂ ತೂಕದ ಚಿನ್ನದ ಸರ, ನಗದು ಕಸಿದುಕೊಂಡು ಪರಾರಿ ಆಗಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.