ಬೆಂಗಳೂರು: ಮನೆಗಳಿಗೆ ಹಾಕಿದ್ದ ಬೀಗ ಒಡೆದು ಚಿನ್ನಾಭರಣ, ನಗದು ಕಳ್ಳತನ ಮಾಡುತ್ತಿದ್ದ ಅರಣ್ಯ ಇಲಾಖೆಯ ನಿವೃತ್ತ ವನಪಾಲಕನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಜಿಎಫ್‌ನ ನಾಗರಾಜ್ ಅಲಿಯಾಸ್ ‘ಫಾರೆಸ್ಟ್’ ನಾಗ(66) ಬಂಧಿತ.
ಆರೋಪಿಯಿಂದ ₹2.5 ಲಕ್ಷ ನಗದು, ₹25 ಲಕ್ಷ ಮೌಲ್ಯದ 208 ಗ್ರಾಂ ಚಿನ್ನಾಭರಣ, 1 ಕೆ.ಜಿ 100 ಗ್ರಾಂ ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕೋಣನಕುಂಟೆ ಕ್ರಾಸ್ ಮನೆಯೊಂದರಲ್ಲಿ 182 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿಯ ವಸ್ತುಗಳು ಮತ್ತು ₹5 ಲಕ್ಷ ನಗದು ಕಳವು ನಡೆದಿತ್ತು. ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
‘ಆರೋಪಿ ನಾಗರಾಜ್ ಈ ಹಿಂದೆ ರಾಮನಗರ, ಕೋಲಾರ ಸೇರಿದಂತೆ ವಿವಿಧೆಡೆ ಅರಣ್ಯ ವನಪಾಲಕನಾಗಿ ಕೆಲಸ ಮಾಡಿದ್ದ. 2008ರಲ್ಲಿ ಕೆಲಸಕ್ಕೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದ. ನಂತರ ಕಳ್ಳತನಕ್ಕೆ ಮುಂದಾಗಿದ್ದ. ಕಳ್ಳತನದಿಂದ ಬಂದ ಹಣದಲ್ಲಿ ಮನೆ ನಿರ್ವಹಣೆ, ಮೋಜಿನ ಜೀವನ ನಡೆಸುತ್ತಿದ್ದ. ಇತ್ತೀಚೆಗೆ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಸ್ನೇಹಿತನಿಗೆ ಕೊಟ್ಟಿದ್ದ. ಈ ಮಾಹಿತಿ ಮೇರೆಗೆ ಅವರ ಮನೆಗಳಿಗೆ ತೆರಳಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.