ADVERTISEMENT

ಗುದದ್ವಾರದಲ್ಲಿ 1 ಕೆ.ಜಿ 334 ಗ್ರಾಂ ಚಿನ್ನ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 16:14 IST
Last Updated 4 ಆಗಸ್ಟ್ 2022, 16:14 IST
ಬಂಧಿತ ಇಬ್ಬರು ಪ್ರಯಾಣಿಕರಿಂದ ಜಪ್ತಿ ಮಾಡಲಾದ ಚಿನ್ನದ ಬಿಸ್ಕತ್ ಹಾಗೂ ಅದನ್ನು ಬಚ್ಚಿಟ್ಟಿದ್ದ ಸಣ್ಣ ಗಾತ್ರದ ರಬ್ಬರ್ ಚೀಲ
ಬಂಧಿತ ಇಬ್ಬರು ಪ್ರಯಾಣಿಕರಿಂದ ಜಪ್ತಿ ಮಾಡಲಾದ ಚಿನ್ನದ ಬಿಸ್ಕತ್ ಹಾಗೂ ಅದನ್ನು ಬಚ್ಚಿಟ್ಟಿದ್ದ ಸಣ್ಣ ಗಾತ್ರದ ರಬ್ಬರ್ ಚೀಲ   

ಬೆಂಗಳೂರು: ಶ್ರೀಲಂಕಾದಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಇಬ್ಬರು ಪ್ರಯಾಣಿಕರನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

‘ಶ್ರೀಲಂಕಾ ಏರ್‌ಲೈನ್ಸ್ ವಿಮಾನದಲ್ಲಿ ಬುಧವಾರ ಬಂದಿಳಿದಿದ್ದ ಇಬ್ಬರು ಪ್ರಯಾಣಿಕರ ಬಳಿ ₹ 69.74 ಲಕ್ಷ ಮೌಲ್ಯದ 1 ಕೆ.ಜಿ 334 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಅಕ್ರಮ ಸಾಗಣೆ ಜಾಲದಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಶಂಕೆ ಇದೆ. ಆರೋಪಿಗಳ ಹೆಸರು ಸದ್ಯಕ್ಕೆ ಬಹಿರಂಗಪಡಿಸಲಾಗದು’ ಎಂದು ಕಸ್ಟಮ್ಸ್ ಮೂಲಗಳು ಹೇಳಿವೆ.

‘ಆರೋಪಿಗಳು ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಬಂದಿಳಿದಿದ್ದರು. ಅವರಿಬ್ಬರ ಬಳಿ ಚಿನ್ನವಿರುವ ಮಾಹಿತಿ ಲಭ್ಯವಾಗಿತ್ತು. ಇಬ್ಬರನ್ನೂ ಪ್ರಾಥಮಿಕ ತಪಾಸಣೆಗೆ ಒಳಪಡಿಸಿದಾಗ ಯಾವುದೇ ಚಿನ್ನ ಪತ್ತೆಯಾಗಿರಲಿಲ್ಲ.’

ADVERTISEMENT

‘ಮಾಹಿತಿ ಖಚಿತವಾಗಿದ್ದರಿಂದ ಇಬ್ಬರನ್ನೂ ವಿಶೇಷ ಕೊಠಡಿಗೆ ಕರೆದೊಯ್ದು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಅವರಿಬ್ಬರೂ ತಮ್ಮ ಗುದದ್ವಾರದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಯಿತು. ಚಿನ್ನದ ಬಿಸ್ಕತ್‌ಗಳನ್ನು ಸಣ್ಣ ಗಾತ್ರದ ರಬ್ಬರ್‌ ಚೀಲದಲ್ಲಿ ಹಾಕಿ, ಗುದದ್ವಾರದಲ್ಲಿ ಇಟ್ಟುಕೊಂಡಿದ್ದರು. ವೈದ್ಯರ ಸಹಾಯದಿಂದ ಚಿನ್ನದ ಬಿಸ್ಕತ್‌ಗಳನ್ನು ಹೊರಗೆ ತೆಗೆಯಲಾಯಿತು’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.