ADVERTISEMENT

ಬೆಂಗಳೂರು: ₹14.75 ಕೋಟಿ ಮೌಲ್ಯದ ಚಿನ್ನ ಕಳವು

ಗಿರವಿ ಇಟ್ಟ 8.9 ಕೆ.ಜಿ ಚಿನ್ನವೂ ಕಳವು: ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 0:30 IST
Last Updated 10 ನವೆಂಬರ್ 2024, 0:30 IST
   

ಬೆಂಗಳೂರು: ವಿಜಯನಗರದ ಅರಿಹಂತ್‌ ಚಿನ್ನಾಭರಣ ಅಂಗಡಿ ಮಾಲೀಕ ಸುರೇಂದ್ರ ಕುಮಾರ್ ಜೈನ್‌ ಅವರ ಮನೆಯಲ್ಲಿದ್ದ ₹14.75 ಕೋಟಿ ಮೌಲ್ಯದ ಚಿನ್ನಾಭರಣ, ₹40.80 ಲಕ್ಷ ನಗದು ಕಳ್ಳತನವಾಗಿದ್ದು, ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗಿರವಿ ಇಟ್ಟುಕೊಂಡಿದ್ದ 8 ಕೆ.ಜಿ 900 ಗ್ರಾಂ ಚಿನ್ನಾಭರಣ ಸೇರಿದಂತೆ ಮನೆಯಲ್ಲಿದ್ದ ಒಟ್ಟು 18 ಕೆ.ಜಿ 437 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ’ ಎಂದು ಮಾಲೀಕ ದೂರು ನೀಡಿದ್ದಾರೆ.  

‘ದೂರುದಾರರ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳದ ನಮ್ರಾಜ್‌ ಜತೆಗೆ ಇನ್ನೂ ಮೂವರು ಆರೋಪಿಗಳು ಸೇರಿಕೊಂಡು ಕೃತ್ಯ ಎಸಗಿರುವ ಶಂಕೆಯಿದೆ. ಆರೋ‍ಪಿಗಳು ಚಿನ್ನಾಭರಣ, ನಗದು ಸಹಿತ ನೇಪಾಳಕ್ಕೆ ಪರಾರಿ ಆಗಿದ್ದಾರೆ. ವಿಶೇಷ ಪೊಲೀಸ್‌ ತಂಡ ನೇಪಾಳಕ್ಕೆ ತೆರಳಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಾಗಡಿ ರಸ್ತೆಯ ವಿದ್ಯಾರಣ್ಯನಗರ ಒಂದನೇ ಮುಖ್ಯರಸ್ತೆಯಲ್ಲಿ ಸುರೇಂದ್ರ ಕುಮಾರ್‌ ಜೈನ್‌ ಮಾಲೀಕತ್ವದ ಚಿನ್ನಾಭರಣ ಮಳಿಗೆಯಿದೆ. ಹೊಸಹಳ್ಳಿಯ ಪ್ರಿಯಾಂಕ ಟೆಂಟ್‌ ಹೌಸ್ ಎದುರಿನ ಲ್ಲಿರುವ ಅವರ ಮನೆಯಲ್ಲಿ ಸುರೇಂದ್ರ ಹಾಗೂ ಕುಟುಂಬಸ್ಥರು ವಾಸಿಸುತ್ತಿರುವ ಮನೆಯಲ್ಲಿ ಕಳ್ಳತನ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ನಮ್ರಾಜ್‌ ಎಂಬಾತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ನಮ್ರಾಜ್‌ಗೆ ಮನೆಯಿಲ್ಲದ ಕಾರಣಕ್ಕೆ ಸುರೇಂದ್ರ ಕುಮಾರ್‌ ಮನೆಯ ಪಾರ್ಕಿಂಗ್ ಸ್ಥಳದಲ್ಲಿದ್ದ ಕೊಠಡಿಯನ್ನು ವಾಸ್ತವ್ಯಕ್ಕೆ ನೀಡಲಾಗಿತ್ತು. ಸೆಕ್ಯೂರಿಟಿ ಕೆಲಸದ ಜತೆಗೆ ಮಹಡಿಯಲ್ಲಿದ್ದ ಆಲಂಕಾರಿಕ ಗಿಡಗಳಿಗೆ ನೀರು ಹಾಕುವ ಕೆಲಸವನ್ನೂ ಆತ ಮಾಡುತ್ತಿದ್ದ. ಮನೆಯಲ್ಲಿ ನಗದು, ಚಿನ್ನಾಭರಣ ಇಡುತ್ತಿದ್ದ ಜಾಗ ಆತನಿಗೆ ತಿಳಿದಿತ್ತು. ಆತನೇ ಕೃತ್ಯ ಎಸಗಿದ್ದಾನೆ’ ಎಂದು ಮಾಲೀಕರು ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಜಾತ್ರೆಗೆ ತೆರಳಿದ್ದ ವೇಳೆ ಕಳ್ಳತನ: ‘ಸುರೇಂದ್ರ ಕುಮಾರ್ ಕುಟುಂಬ ಸಹಿತ ನವೆಂಬರ್‌ 1ರಂದು ಗುಜರಾತ್‌ನ ಗಿರ್ನಾರ್‌ ಜಾತ್ರೆಗೆ ತೆರಳಿದ್ದರು. ಅದೇ ಸಮಯ ನೋಡಿಕೊಂಡು ಆರೋಪಿ ಕೃತ್ಯ ಎಸಗಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

ಸುರೇಂದ್ರ ಕುಮಾರ್ ಮನೆಯವರಿಗೆ ಸೇರಿದ್ದ 2 ಕೆ.ಜಿ 835 ಗ್ರಾಂ ಚಿನ್ನಾಭರಣ, ಅವರ ಸಹೋದರಿಯರ 2 ಕೆ.ಜಿ 790 ಗ್ರಾಂ ಚಿನ್ನಾಭರಣ, 700 ಗ್ರಾಂ ಚಿನ್ನದ ಬಿಸ್ಕೆಟ್‌, 212 ಗ್ರಾಂ ವಜ್ರಾಭರಣ, ಅಂಗಡಿಯಿಂದ ಮನೆಗೆ ತಂದು ಇಡಲಾಗಿದ್ದ 3 ಕೆ.ಜಿ ಚಿನ್ನ ಹಾಗೂ ಗ್ರಾಹಕರಿಂದ ಗಿರವಿ ಇಟ್ಟುಕೊಂಡಿದ್ದ 8 ಕೆ.ಜಿ 900 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಒಟ್ಟು ₹15.15 ಕೋಟಿ ಮೊತ್ತದ ಚಿನ್ನ, ನಗದು ಕಳ್ಳತನವಾಗಿದೆ’ ಎಂದು ದೂರುದಾರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.