ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ಗಡಿ ಗ್ರಾಮ ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಮಹಿಳೆಯೊಬ್ಬರನ್ನು ಭಾನುವಾರ ಸಂಜೆ ಚಿರತೆಯೊಂದು ಕೊಂದು, ತಲೆ ಹಾಗೂ ಎದೆಯ ಭಾಗಗಳನ್ನು ತಿಂದು ಹಾಕಿದೆ.
ಗೊಲ್ಲರಹಟ್ಟಿ ಕರಿಯಮ್ಮ (55) ಮೃತಪಟ್ಟವರು. ಭಾನುವಾರ ಸಂಜೆ 5.30ರ ವೇಳೆಗೆ ಕರಿಯಮ್ಮ ತಮ್ಮ ಮನೆಯ ಸಮೀಪವಿರುವ ಹಿತ್ತಲಲ್ಲಿ ಹುಲ್ಲು ಕೊಯ್ಯಲು ಹೋಗಿದ್ದರು. 6.30 ಗಂಟೆಯಾದರೂ ಅವರು ಹಿಂತಿರುಗದೇ ಇದ್ದಾಗ, ಮನೆಯವರು ಹುಡುಕಾಡಿದ್ದರು.
‘ಹಿತ್ತಲ ಬಳಿ ಕರಿಯಮ್ಮ ಅವರ ಚಪ್ಪಲಿ ಮತ್ತು ಹರಿದ ಬಟ್ಟೆಯ ಜತೆಗೆ ರಕ್ತದ ಕಲೆಯೂ ಪತ್ತೆಯಾಯಿತು. ಆಗ ಗ್ರಾಮದ 80ಕ್ಕೂ ಹೆಚ್ಚು ಜನರು ಗುಂಪುಕಟ್ಟಿಕೊಂಡು, ಹುಡುಕಾಡಿದೆವು. ರಸ್ತೆಗೆ ಸಮೀಪವೇ ಚಿರತೆ ಗುಟುರು ಹಾಕುವ ಸದ್ದು ಕೇಳಿತು. ಅಲ್ಲೇ ಅವರ ಮೃತದೇಹ ಇತ್ತು’ ಎಂದು ಗ್ರಾಮದ ಮುನಿರಂಗಯ್ಯ ವಿವರಿಸಿದರು.
‘ಎಲ್ಲರೂ ಗಲಾಟೆ ಮಾಡಿ ಚಿರತೆಯನ್ನು ಓಡಿಸಿದೆವು. ಕರಿಯಮ್ಮ ದೇಹದಲ್ಲಿ ರುಂಡವೇ ಇರಲಿಲ್ಲ. ಪೊಲೀಸರಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿದೆವು. ಪೊಲೀಸರು, ಅರಣ್ಯ ಕಾವಲುಗಾರರು ಬಂದರು. ರಾತ್ರಿ 10ರ ವೇಳೆಗೆ ಮತ್ತೆ ಹಿಂತಿರುಗಿದ ಚಿರತೆ, ದೇಹವನ್ನು ಮತ್ತಷ್ಟು ದೂರ ಎಳೆದೊಯ್ದಿತು. ಬೆಂಕಿ ಹಚ್ಚಿ, ಗಲಾಟೆ ಮಾಡಿದ್ದರಿಂದ ಬಿಟ್ಟು ಹೋಯಿತು’ ಎಂದು ಮಾಹಿತಿ ನೀಡಿದರು.
ಮೃತದೇಹದ ತಲೆಯನ್ನು ಬೇರೆಡೆ ಒಯ್ದು ತಿಂದು ಹಾಕಿದೆ. ಭುಜ, ಎದೆ ಮತ್ತು ಎಡಗೈ ಅನ್ನು ಪೂರ್ಣ ತಿಂದುಹಾಕಿದೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
‘ಈಗಾಗಲೇ ಚಿರತೆ ಗ್ರಾಮದ ಎರಡು ಮೂರು ಮಂದಿ ಮೇಲೆ ದಾಳಿ ಮಾಡಿದೆ. ಈ ಕುರಿತು ಅರಣ್ಯ ಇಲಾಖೆಗೆ ಲಿಖಿತ ದೂರು ನೀಡಿದ್ದರೂ ಕೇವಲ ಬೋನು ತಂದಿಟ್ಟು ನಿರ್ಲಕ್ಷ್ಯ ತೋರಿದ್ದರು. ಅಂದು ಎಚ್ಚೆತ್ತುಕೊಂಡಿದ್ದರೆ ಇಂಥ ಅನಾಹುತ ಆಗುತ್ತಿರಲಿಲ್ಲ’ ಎಂದು ಗ್ರಾಮಸ್ಥರು ದೂರಿದರು.
ಮೃತ ಮಹಿಳೆಯ ಅತ್ತಿಗೆ ಅಮ್ಮಯ್ಯಮ್ಮ ಮಾತನಾಡಿ, ‘ಸೆಪ್ಟೆಂಬರ್‌ನಲ್ಲಿ ನನ್ನ ಮೇಲೂ ಚಿರತೆ ದಾಳಿ ನಡೆಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೆ’ ಎಂದು ತಮ್ಮ ಬೆನ್ನಿನಲ್ಲಿರುವ ಗಾಯವನ್ನು ತೋರಿಸಿದರು.
‘ಅಮ್ಮಯ್ಯಮ್ಮ ಅವರ ಮೇಲೆ ದಾಳಿ ನಡೆಸಿದಾಗ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದೆವು. ಚಿರತೆ ಹಿಡಿಯುತ್ತೇವೆ, ಪ್ರಕರಣ ದಾಖಲಿಸುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಏನೂ ಮಾಡಲಿಲ್ಲ. ಈಗ ಚಿರತೆ ಒಬ್ಬರನ್ನು ತಿಂದು ಹಾಕಿದ ಮೇಲೆ ಬಂದಿದ್ದಾರೆ’ ಎಂದು ಗಂಗಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ನಿಜಾಮುದ್ದೀನ್ ‘ಕ್ಯಾಮೆರಾದ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಪತ್ತೆ ಹಚ್ಚಿ ಹಿಡಿಯುತ್ತೇವೆ. ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಅವರ ನೆರವನ್ನು ಪಡೆಯುತ್ತೇವೆ. ಸರ್ಕಾರದಿಂದ ಮೃತ ಮಹಿಳೆ ಕುಟುಂಬಕ್ಕೆ ₹15 ಲಕ್ಷ ಪರಿಹಾರ ದೊರಕಿಸಿ ಕೊಡುತ್ತೇವೆ’ ಎಂದು ಭರವಸೆ ನೀಡಿದರು.
ಹಸು ಮೇಯಿಸುವಾಗ ನನ್ನ ಮೇಲೆ ದಾಳಿ ಮಾಡಿದ್ದ ಚಿರತೆ ಈಗ ಕರಿಯಮ್ಮ ಅವರ ಜೀವ ತೆಗೆದಿದೆ. ಈ ಹಿಂದೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿದ್ದರೆ ಒಂದು ಜೀವ ಉಳಿಯುತ್ತಿತ್ತು
-ಅಮ್ಮಯ್ಯಮ್ಮ ಹಿಂದೆ ಚಿರತೆ ದಾಳಿಗೊಳಗಾದ ಮಹಿಳೆ
ಬೋನು ಇಟ್ಟು ಚಿರತೆಯನ್ನು ಹಿಡಿದು ದೂರ ಬಿಡಲಾಗುವುದು. ಮಂಜುನಾಥ್ ಆರ್‌ಎಫ್‌ಒ
–ನೆಲಮಂಗಲ ಪ್ರಾದೇಶಿಕ ವಲಯ
ಹಿಂದಿನ ದಾಳಿಗಳು
* ನವೆಂಬರ್ 19 2023: ಚಿರತೆ ಕಂಬಾಳುವಿನ ಕಲ್ಪವೇಂದ್ರ ಅವರ ಮನೆಯ ಮುಂದಿನ ಸಾಕು ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು. ಇದು ಸಿ.ಸಿ.ಟಿ.ವಿಯಲ್ಲಿ ದಾಖಲಾಗಿತ್ತು.
* ಡಿಸೆಂಬರ್ 1 2023: ಕಂಬಾಳು ಗೊಲ್ಲರಹಟ್ಟಿಯಲ್ಲಿ ಮೃತ ಮಹಿಳೆ ಕರಿಯಮ್ಮ ಅವರ ಅತ್ತಿಗೆ ಅಮ್ಮಯ್ಯಮ್ಮ ಮೇಲೆ ಚಿರತೆ ದಾಳಿ ಮಾಡಿ ಗಾಯಗೊಳಿಸಿತ್ತು.
‘ದಾಳಿಗಳಿಂದ ತಪ್ಪಿಸಿಕೊಂಡಿದ್ದರು’
‘ಕರಿಯಮ್ಮ ಬಹಳ ಧೈರ್ಯವಂತೆ. ಹಿಂದೆ ಒಮ್ಮೆ ಹಸು ಕಾಯುತ್ತಿದ್ದಾಗ ಹಾಗೂ ಒಮ್ಮೆ ಮೇಕೆ ಮೇಲೆ ಚಿರತೆ ದಾಳಿ ಮಾಡಿದಾಗ ತಪ್ಪಿಸಿಕೊಂಡು ಮೇಕೆಯನ್ನು ಕಾಪಾಡಿದ್ದರು. ಆದರೆ ಮೂರನೇ ಸಲ ವನ್ಯಜೀವಿ ದಾಳಿಗೆ ಒಳಗಾಗಿ ಜೀವ ತೆತ್ತಿದ್ದಾರೆ’ ಎಂದು ಕಂಬಾಳು ಗೊಲ್ಲರಹಟ್ಟಿಯ ಗ್ರಾಮಸ್ಥರು ಹೇಳಿದರು.
ಮತ್ತೆರಡು ಮೇಕೆ ಬಲಿ
ಇತ್ತ ಮಹಿಳೆಯನ್ನು ಕೊಂದ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನು ಇರಿಸಿ ಕಾಯುತ್ತಿದ್ದರೆ ಗೊಲ್ಲರಹಟ್ಟಿಯ ಸಮೀಪದ ಬ್ಯಾಡರಹಳ್ಳಿಯ ಗೋಮಾಳದಲ್ಲಿ ಚಿರತೆ ಸೋಮವಾರ ಸಂಜೆ ಎರಡು ಮೇಕೆಗಳನ್ನು ಕೊಂದಿದೆ. ಅಂಡೆಕಲ್ಲು ಕಾಲೊನಿಯ ರಾಜಣ್ಣ ಮತ್ತು ಕರಿಯಮ್ಮ ಅವರು ಬ್ಯಾಡರಹಳ್ಳಿಯ ಗೋಮಾಳದಲ್ಲಿ ಸೋಮವಾರ ಸಂಜೆ ಮನೆಗೆ ಮೇಕೆ ಹೊಡೆದುಕೊಂಡು ಬರುತ್ತಿದ್ದರು. ಆಗ ಹಿಂದಿನಿಂದ ಬಂದ ಚಿರತೆ ಮೇಕೆಯೊಂದರ ಮೇಲೆ ದಾಳಿ ಮಾಡಿದೆ. ಅದನ್ನು ಬಿಡಿಸಲು ಮುಂದಾದ ರಾಜಣ್ಣ ಅವರ ಕಾಲಿಗೆ ಪರಚಿದೆ. ಚಿರತೆ ದಾಳಿಯಿಂದ ಕರಿಯಮ್ಮ ಅವರ ಮೇಕೆ ಸತ್ತಿದ್ದರೆ ರಾಜಣ್ಣ ಅವರ ಮೇಕೆಯೊಂದನ್ನು ಎಳೆದೊಯ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.