ಬೆಂಗಳೂರು: ರಾಜ್ಯದ 10 ಲಕ್ಷ ಯುವಕ, ಯುವತಿಯರಿಗೆ ಕೌಶಲ ತರಬೇತಿ ನೀಡಲಾಗಿದೆ. ಇದರಿಂದ ಅವರಿಗೆ ಅಧಿಕ ಸಂಬಳದ ಉದ್ಯೋಗ ಪಡೆಯಲು ಸಹಕಾರಿಯಾಗಿದೆ ಎಂದುಉನ್ನತ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ನಗರದ ಸರ್ಕಾರಿ ರಾಮನಾರಾಯಣ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ನಿಗಮ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ‘ಪ್ರಗತಿ ಪಥ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಉದ್ಯೋಗ ಮೇಳದಲ್ಲಿ 200ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಸುಮಾರು 5 ಸಾವಿರ ಅಭ್ಯರ್ಥಿಗಳು ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಯುವ ಜನರು ಉದ್ಯೋಗ ಪಡೆಯಲು ಅವರನ್ನು ಪದವಿ ಹಂತದಿಂದಲೇ ಸಜ್ಜುಗೊಳಿಸಲಾಗುತ್ತಿದೆ. ಅದಕ್ಕಾಗಿಪದವಿ ಕೋರ್ಸುಗಳಲ್ಲಿ ಡಿಜಿಟಲ್, ಹಣಕಾಸು ಮತ್ತು ತಂತ್ರಜ್ಞಾನ ಸಾಕ್ಷರತೆ ಕಡ್ಡಾಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೂಕ್ತ ವಿದ್ಯಾಭ್ಯಾಸ, ಅರ್ಹತೆ, ಆಧುನಿಕ ಕೌಶಲಗಳಿದ್ದರೆ ಅವಕಾಶಗಳಿಗೆ ಬರವಿಲ್ಲ. ಆದರೆ, ಇಂದು ಉದ್ಯಮ ಕ್ಷೇತ್ರಕ್ಕೆ ಅಗತ್ಯವಿರುವಷ್ಟು ನುರಿತ ಮಾನವ ಸಂಪನ್ಮೂಲದ ಕೊರತೆ ಇದೆ ಎಂದರು.
ಶಾಸಕ ರಿಜ್ವಾನ್ ಅರ್ಷದ್, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ಮಾತನಾಡಿದರು.ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಡಿ.ಎಲ್. ಕೃಷ್ಣಮೂರ್ತಿ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಡಾ.ಎಸ್. ಶೈಲಜಾ, ರೋಟರಿ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಸಂಜಯ್ ಉದಾನಿ, ಪ್ರಾಂಶು ಪಾಲ ಡಾ.ಬಿ.ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.