ADVERTISEMENT

ಪೆಡ್ಲರ್‌ಗಳ ವಿರುದ್ಧ ಗೂಂಡಾ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2018, 18:47 IST
Last Updated 13 ಜುಲೈ 2018, 18:47 IST

ಬೆಂಗಳೂರು: ಡ್ರಗ್‌ ಮಾಫಿಯಾ ಮಟ್ಟ ಹಾಕುವ ಸಲುವಾಗಿ ಆ ದಂಧೆಯಲ್ಲಿ ಪಾಲ್ಗೊಂಡವರ (ಪೆಡ್ಲರ್‌ಗಳು) ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್‌ ಮಾಫಿಯಾ ಕುರಿತಂತೆ ವಿಧಾನಸಭೆಯಲ್ಲಿ ಶುಕ್ರವಾರ ಸುದೀರ್ಘವಾಗಿ ನಡೆದ ಚರ್ಚೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಈ ನಿರ್ಧಾರ ಪ್ರಕಟಿಸಿದರು.

‘ಗೃಹ, ಆರೋಗ್ಯ, ಅಬಕಾರಿ ಹಾಗೂ ಶಿಕ್ಷಣ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಕರೆದು, ಈ ಪಿಡುಗಿನ ವಿರುದ್ಧ ಒಟ್ಟಾಗಿ ಕಾರ್ಯಾಚರಣೆ ನಡೆಸುವಂತಹ ವ್ಯವಸ್ಥೆಯನ್ನು ರೂಪಿಸಲಿದ್ದೇವೆ. ವೀಸಾ ಅವಧಿ ಮುಗಿದರೂ ನಗರದಲ್ಲಿ ಉಳಿದು ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ವಿದೇಶಿ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಾಪಸ್‌ ಕಳಿಸುತ್ತೇವೆ’ ಎಂದು ಪ್ರಕಟಿಸಿದರು.

ADVERTISEMENT

ಯುವ ಸಮುದಾಯ ದಾರಿ ತಪ್ಪದಂತೆ ನೋಡಿಕೊಳ್ಳಲು ಕ್ರೀಡಾ ಸೌಲಭ್ಯ ಕಲ್ಪಿಸಲಾಗುತ್ತದೆ. ಬೆಂಗಳೂರಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ಗ್ರಾಮ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಡ್ರಗ್‌ ಮಾಫಿಯಾ ಹೆಚ್ಚು ಸಕ್ರಿಯವಾಗಿದೆ ಎಂಬುದನ್ನು ಒಪ್ಪಿಕೊಂಡ ಉಪ ಮುಖ್ಯಮಂತ್ರಿ, ‘ಮಾದಕ ದ್ರವ್ಯಕ್ಕೆ ಮಾತ್ರೆ ರೂಪ ಕೊಟ್ಟು ವಿದೇಶಕ್ಕೆ ಸಾಗಿಸುವ ಘಟಕವೊಂದನ್ನು ಕೊಡಿಗೆಹಳ್ಳಿಯಲ್ಲಿ ಪತ್ತೆ ಹಚ್ಚಲಾಗಿದೆ’ ಎಂದು ವಿವರಿಸಿದರು.

ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿಯ ಆರ್‌.ಅಶೋಕ, ಡ್ರಗ್‌ ಮಾಫಿಯಾ ಹೇಗೆ ಸಕ್ರಿಯವಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.

‘ಆಫ್ರಿಕಾ ದೇಶಗಳಿಂದ ಪೆಡ್ಲರ್‌ಗಳ ಮೂಲಕ ಕೊಕೇನ್‌, ಹೆರಾಯಿನ್‌, ಚರಸ್‌, ಅಫೀಮು, ಗಾಂಜಾದಂತಹ ಮಾದಕ ವಸ್ತುಗಳು ಕಳ್ಳ ಮಾರ್ಗದಲ್ಲಿ ಬೆಂಗಳೂರಿಗೆ ಬರುತ್ತಿವೆ. ಈ ಹಾವಳಿ ತಡೆಗಟ್ಟದಿದ್ದರೆ ರಾಜ್ಯವೂ ಪಂಜಾಬ್‌ನಂತಹ ಸ್ಥಿತಿ ತಂದುಕೊಳ್ಳಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈಗೀಗ ಗಾಂಜಾ, ಅಫೀಮಿನ ಬೀಜಗಳನ್ನು ಬೇರೆ ದೇಶಗಳಿಂದ ತರಿಸಿಕೊಂಡು ಬನ್ನೇರುಘಟ್ಟದ ಆಸುಪಾಸಿನಲ್ಲೂ ಬೆಳೆಯಲಾಗುತ್ತಿದೆ’ ಎಂದು ಹೇಳಿದರು.

ಬಿಜೆಪಿಯ ಅರವಿಂದ ಲಿಂಬಾವಳಿ, ‘ಮಾದಕ ವ್ಯಸನದಿಂದ ಮುಕ್ತಗೊಳಿಸುವ ಆರೈಕೆ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲೂ ತೆರೆಯಬೇಕು’ ಎಂದು ಒತ್ತಾಯಿಸಿದರು. ಅದೇ ಪಕ್ಷದ ಕೆ.ಪೂರ್ಣಿಮಾ, ‘ಅಕ್ರಮವಾಗಿ ನಗರದಲ್ಲಿ ವಾಸವಾಗಿರುವ ವಿದೇಶಿಯರು ರಾಜಾರೋಷವಾಗಿ ಬ್ಯೂಟಿ ಪಾರ್ಲರ್‌, ಮಸಾಜ್‌ ಕೇಂದ್ರ ತೆರೆದು ಡ್ರಗ್‌ ಮಾಫಿಯಾದಲ್ಲೂ ಭಾಗಿಯಾಗಿದ್ದಾರೆ. ಅವರನ್ನು ತಕ್ಷಣ ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ‘ಮಾದಕ ವ್ಯಸನಕ್ಕೆ ಕಾರಣರಾದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಮಾದಕವ್ಯಸನಿಯನ್ನು ಪತ್ತೆ ಹಚ್ಚುವ ನಾಯಿ!
ಜರ್ಮನಿಗೆ ಹೋಗಿದ್ದ ಪ್ರಸಂಗವನ್ನು ನೆನಪಿಸಿಕೊಂಡ ಉಪ ಮುಖ್ಯಮಂತ್ರಿ, ‘ಅಲ್ಲಿನ ಪೊಲೀಸರು ನಮಗೊಂದು ನಾಯಿಯನ್ನು ತೋರಿಸಿದರು. ಮಾದಕ ದ್ರವ್ಯ ಸೇವಿಸಿ ಆರು ತಿಂಗಳಾಗಿದ್ದರೂ ಸೇವನೆ ಮಾಡಿದವರನ್ನು ಈ ನಾಯಿ ಪತ್ತೆ ಮಾಡುತ್ತದೆ ಎಂಬ ಮಾಹಿತಿ ನೀಡಿದರು’ ಎಂದು ಹೇಳಿದರು.

ಅದಕ್ಕೆ ಅರವಿಂದ ಲಿಂಬಾವಳಿ, ‘ಅಂತಹ ಕೆಲವು ನಾಯಿಗಳನ್ನು ಇಲ್ಲಿಗೂ ತರಿಸಿ’ ಎಂದು ಆಗ್ರಹಿಸಿದರು. ‘ಪೊಲೀಸ್‌ ನಾಯಿಗಳಿಗೆ ಅದರ ತರಬೇತಿ ನೀಡಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಉತ್ತರಿಸಿದರು.

***

ಪುಗಸಟ್ಟೆ ದುಡ್ಡು ಇರೋರು, ಮಮ್ಮಿ–ಡ್ಯಾಡಿ ಎಂದು ಕರೆಸಿಕೊಳ್ಳುವಲ್ಲಿ ಖುಷಿ ಪಡೋರು, ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳನ್ನು ಓದಲು ಹಾಕಿದೋರಿಗೆ ಸಂಜೆ ಮಕ್ಕಳು ಓಲಾಡಿಕೊಂಡು ಬಂದ್ರೆ ಅಲ್ವಾ ಗೌರವ?
-ರಮೇಶಕುಮಾರ್‌, ವಿಧಾನಸಭಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.