ಬೊಮ್ಮನಹಳ್ಳಿ: ರಾಜ್ಯ ಸರ್ಕಾರ ಮಳೆಗಾಗಿ ಪರ್ಜನ್ಯ ಹೋಮ ನಡೆಸಿದರೆ, ಇತ್ತ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ, ವೀವರ್ಸ್ ಕಾಲೊನಿ ಹಾಗು ಪಿಲ್ಲಗಾನಹಳ್ಳಿ ನಿವಾಸಿಗಳು ಮಾತ್ರ ಮಳೆ ಬರುವುದು ಬೇಡವೆನ್ನುತ್ತಾರೆ! ಹೌದು ಪ್ರತಿ ಬಾರಿ ಮಳೆ ಬಂದಾಗಲೂ ರಾಜಕಾಲುವೆಯ ಅಂಚಿನ ಮನೆಗಳ ನಿವಾಸಿಗಳು ಆತಂಕಕ್ಕೆ ಒಳಗಾಗುತ್ತಿದ್ದಾರೆ.
ತಡೆಗೋಡೆ ಇಲ್ಲದ ರಾಜಕಾಲುವೆ, ಹೂಳು ತುಂಬಿದ ಹಾಗೂ ಒಡೆದ ಚರಂಡಿಗಳು, ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು ಎಲ್ಲೆಡೆ ಕಾಣಸಿಗುತ್ತದೆ. ಚರಂಡಿಗಳ ಹೂಳು ತೆಗೆದು ಐದಾರು ವರ್ಷಗಳು ಕಳೆದಿದೆಯಾದರೂ ಮೇಯರ್ ಬಂದು ತಾಕೀತು ಮಾಡಿದರೂ ಹೂಳು ತೆಗೆಯಲು ಮುಂದಾಗಿಲ್ಲ ಎಂದು ದೂರುತ್ತಾರೆ ವೀವರ್ಸ್ ಕಾಲೊನಿ ನಿವಾಸಿಗಳು.
‘ನೆರೆ ಬಂದಾಗ ಎಲ್ಲರೂ ಬರುತ್ತಾರೆ. ಮತ್ತೆಂದೂ ಇತ್ತ ಸುಳಿಯುವುದಿಲ್ಲ. ಇಲ್ಲಿನ ಪಾಲಿಕೆ ಸದಸ್ಯರ ಮುಖ ನೋಡಿ ನಾಲ್ಕು ತಿಂಗಳಾಗಿದೆ. ಚುನಾವಣೆ ಸಮಯದಲ್ಲಿ ಎಲ್ಲವನ್ನೂ ಕೊಡುತ್ತೇವೆ ಎನ್ನುತ್ತಾರೆ. ನಾವೂ ಪ್ರತಿ ಬಾರಿ ಮೋಸ ಹೋಗುತ್ತಿದ್ದೇವೆ’ ಎನ್ನುತ್ತಾರೆ ಹೆಸರೇಳಲಿಚ್ಛಿಸದ ವೀವರ್ಸ್ ಕಾಲೊನಿ ಗೃಹಿಣಿ.
‘ಹೋದ ವರ್ಷ ಮಳೆ ಬಂದಾಗ ಮನೆಯಲ್ಲಿ ಅಕ್ಕಿಯೂ ಇಲ್ಲದಂತೆ ಎಲ್ಲವೂ ಕೊಚ್ಚಿ ಹೋಗಿತ್ತು, ಮಕ್ಕಳು ಇರೋ ಮನೆ, ಮಳೆ ಮೋಡ ಕಂಡ್ರೆ ದಿಗಿಲು ಹುಟ್ಟುತ್ತದೆ’ ಎಂದು ಆತಂಕ ಆತಂಕ ವ್ಯಕ್ತಪಡಿಸುತ್ತಾರೆ ಪಿಲ್ಲಗಾನಹಳ್ಳಿಯ ಪುಷ್ಪಮ್ಮ.
‘ನೆರೆ ಬಂದಾಗ ಸರ್ಕಾರ ನೆರೆ ಪರಿಹಾರಕ್ಕಾಗಿ ಸಾಕಷ್ಟು ಅನುದಾನ ನೀಡುತ್ತದೆ. ಕೊಟ್ಟ ಅನುದಾನ ಸರಿಯಾಗಿ ಬಳಕೆಯಾದಲ್ಲಿ ಖಂಡಿತ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆ. ಆದರೆ, ಅದು ಆಗುತ್ತಿಲ್ಲ. ವ್ಯಾಪಕ ಭ್ರಷ್ಟಾಚಾರದ ಪರಿಣಾಮ, ಹಣ ಹೊಳೆಯಂತೆ ಹರಿದರೂ ಸಮಸ್ಯೆ ಮಾತ್ರ ಹಾಗೆ ಇರುತ್ತದೆ’ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಗೊಟ್ಟಿಗೆರೆಯ ನಿವಾಸಿ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್, ‘ನಾನು ಈ ವಾರ್ಡಿಗೆ ಬಂದು 15 ದಿನವಷ್ಟೇ ಆಗಿದೆ. ಸಹಾಯಕ ಎಂಜಿನಿಯರ್ ಅವರಿಂದ ಮಾಹಿತಿ ಪಡೆದು ತಕ್ಷಣವೇ ಚರಂಡಿಹೂಳು ತೆಗೆಸಲು ಕ್ರಮವಹಿಸುತ್ತೇನೆ’ ಎಂದರು.
ಶಾಸಕ ಎಂ.ಕೃಷ್ಣಪ್ಪ, ‘110 ಹಳ್ಳಿಗಳ ಕಾವೇರಿ ನೀರಿನ ಪೈಪ್ ಲೈನ್ ಅಳವಡಿಕೆ ಕೆಲಸ ನಡೆಯುತ್ತಿರುವುದರಿಂದ ಇತರೆ ಕಾಮಗಾರಿಗಳಿಗೆ ಅವಕಾಶ ನೀಡುತ್ತಿಲ್ಲ. ರಾಜಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ.
ಸದ್ಯದಲ್ಲೇ ಕಾಮಗಾರಿ ಕೈಗೆತ್ತುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.