ADVERTISEMENT

ಗೊಟ್ಟಿಗೆರೆ ಕೆರೆಯನ್ನು ಕಬಳಿಸಲಿದೆ ರಸ್ತೆ

‘ನಮ್ಮ ಮೆಟ್ರೊ’ ಕಾಮಗಾರಿ ಸಲುವಾಗಿ ಬನ್ನೇರುಘಟ್ಟ ರಸ್ತೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 20:17 IST
Last Updated 9 ಅಕ್ಟೋಬರ್ 2018, 20:17 IST
   

ಬೆಂಗಳೂರು: ನಗರದ ಕೆರೆ-ಕಾಲುವೆಗಳನ್ನು ಒತ್ತುವರಿ ಮಾಡುವುದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ನಡುವೆಯೂ ಸರ್ಕಾರಿ ಸಂಸ್ಥೆಗಳೇ ರಸ್ತೆಗಾಗಿ ಕೆರೆಯೊಂದನ್ನು ಕಬಳಿಸಲು ಮುಂದಾಗಿವೆ!

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ನಿರ್ಮಾಣವಾಗಲಿರುವ ಗೊಟ್ಟಿಗೆರೆ–ನಾಗವಾರ ಮಾರ್ಗ ಗೊಟ್ಟಿಗೆರೆ ಕೆರೆಯ ಪಕ್ಕದಲ್ಲಿರುವ ಬನ್ನೇರುಘಟ್ಟ ರಸ್ತೆಯಲ್ಲಿ ಹಾದುಹೋಗಲಿದೆ. ಮೆಟ್ರೊ ಮಾರ್ಗದ ಸಲುವಾಗಿ ಬನ್ನೇರುಘಟ್ಟ ರಸ್ತೆಯನ್ನು 10ರಿಂದ 15 ಅಡಿಗಳಷ್ಟು ವಿಸ್ತರಿಸಬೇಕಾಗುತ್ತದೆ. ಇದಕ್ಕಾಗಿ ಕೆರೆಯ ಒಂದು ಪಾರ್ಶ್ವವನ್ನು ಬಳಸಿಕೊಳ್ಳಲು ಬಿಬಿಎಂಪಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಅಧಿಕಾರಿಗಳ ಸಭೆಯಲ್ಲಿ ಇತ್ತೀಚೆಗೆ ತೀರ್ಮಾನ ಕೈಗೊಳ್ಳಲಾಗಿದೆ.

‘ಬನ್ನೇರುಘಟ್ಟ ರಸ್ತೆಯಲ್ಲಿ ಮೆಟ್ರೊ ಮಾರ್ಗ ಹಾದುಹೋಗಲಿದೆ. ಹಾಗಾಗಿ ಗೊಟ್ಟಿಗೆರೆ ಕೆರೆಯ ಬಳಿಬನ್ನೇರುಘಟ್ಟ ರಸ್ತೆಯನ್ನು ವಿಸ್ತರಿಸುವ ಸಲುವಾಗಿ ಕೆರೆಯ ಸ್ವಲ್ಪ ಭಾಗ ಬಳಕೆ ಆಗಲಿದೆ’ ಎಂದು ಬಿಬಿಎಂಪಿಯ ಕೆರೆ ಅಭಿವೃದ್ಧಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಟಿ.ಜಗನ್ನಾಥ್ ರಾವ್‌ ತಿಳಿಸಿದರು.

ADVERTISEMENT

‘ಕೆರೆಯ ಒಣಗಿದ ಭಾಗದಲ್ಲಿ ಕಾಂಕ್ರೀಟ್‌ ತಡೆಗೋಡೆಯನ್ನು ಕಟ್ಟಿ ರಸ್ತೆಯನ್ನು ನಿರ್ಮಿಸಲಾಗುತ್ತದೆ. ಕೆರೆಯಲ್ಲಿ ಸೇತುವೆ ನಿರ್ಮಿಸುವ ಯಾವುದೇ ಪ್ರಸ್ತಾಪ ಇಲ್ಲ’ ಎಂದು ರಾವ್‌ ವಿವರಿಸಿದರು.

‘ಕರ್ನಾಟಕ ಸರೋವರಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು (ಕೆಎಲ್‌ಸಿಡಿಎ) ರದ್ದುಪಡಿಸಿದ ಬಳಿಕ ನಗರದಲ್ಲಿ ಕೆರೆಗಳ ಜಾಗವನ್ನು ಕಬಳಿಸುವುದು ತೀರಾ ಸುಲಭವಾಗಿಬಿಟ್ಟಿದೆ. ಕೆಎಲ್‌ಸಿಡಿಎ ಕಾಯ್ದೆಯೂ ರದ್ದಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ರಾಜ್ಯ ಪರಿಸರದ ಮೇಲಿನ ಪರಿಣಾಮ ವಿಶ್ಲೇಷಣಾ ಪ್ರಾಧಿಕಾರ (ಎಸ್‌ಇಐಎಎ) ಮಧ್ಯಪ್ರವೇಶ ಮಾಡಿದರೆ ಮಾತ್ರ ರಸ್ತೆಗಾಗಿ ಈ ಕೆರೆಯ ಜಾಗವನ್ನು ಉಳಿಸಬಹುದು’ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಮೊದಲೇ ಅವನತಿಯ ಹಂತ ತಲುಪಿರುವ ಈ ಕೆರೆಯ ಪ್ರದೇಶವನ್ನು ರಸ್ತೆ ನಿರ್ಮಿಸಲು ಬಳಸುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಟೋಲ್‌ ರಸ್ತೆ ನಿರ್ಮಾಣಕ್ಕೆ, ಅಪಾರ್ಟ್‌ಮೆಂಟ್ ಸಮುಚ್ಚಯಗಳು, ವಾಣಿಜ್ಯ ಕಟ್ಟಡಗಳು ಮತ್ತು ಬಡಾವಣೆಗಳಿಗಾಗಿ ಈ ಕೆರೆಯ ಒಂದಷ್ಟು ಜಾಗವನ್ನು ಈಗಾಗಲೇ ಆಪೋಶನ ತೆಗೆದುಕೊಳ್ಳಲಾಗಿದೆ. ಹೊಸ ಯೋಜನೆಗಾಗಿ ಮತ್ತಷ್ಟು ಭಾಗವನ್ನು ಕಬಳಿಸುವುದು ಸರಿಯಲ್ಲ’ ಎಂದು ಸ್ಥಳೀಯ ನಿವಾಸಿ ಹರ್ಷ ತಿಳಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) 1999ರಲ್ಲಿ ಕೆರೆಯ ಮೇಲೆ ರಸ್ತೆ ನಿರ್ಮಿಸಲು ಮುಂದಾಗಿತ್ತು. ಬಿಡಿಎ ವಿರುದ್ಧ ಪರಿಸರ ಕಾರ್ಯಕರ್ತ ಸುರೇಶ್‌ ಹೆಬ್ಳಿಕರ್‌ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಕೆರೆಯ ಮೇಲೆ ಯಾವುದೇ ರಸ್ತೆ ನಿರ್ಮಿಸುವಂತಿಲ್ಲ. ಜಲಮೂಲವನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು ಎಂದು ಹೈಕೋರ್ಟ್‌ ಆದೇಶ ಮಾಡಿತ್ತು.

‘ಈ ಕೆರೆ ಮೊದಲೇ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಇದರಲ್ಲಿ ರಸ್ತೆ ನಿರ್ಮಿಸಿದರೆ ಅಳಿದುಳಿದ ಕೆರೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಸುರೇಶ್‌ ಹೆಬ್ಳಿಕರ್‌ ತಿಳಿಸಿದರು.

ಅಂಕಿ ಅಂಶ

37 ಎಕರೆ 13 ಗುಂಟೆ

ಗೊಟ್ಟಿಗೆರೆ ಕೆರೆಯ ವಿಸ್ತೀರ್ಣ

15 ಅಡಿ

ಬನ್ನೇರುಘಟ್ಟ ರಸ್ತೆ ವಿಸ್ತರಣೆಗೆ ಬೇಕಾಗುವ ಕೆರೆಯ ಜಾಗ

ಕೆರೆಗೆ ಕುತ್ತು–ವಿಜ್ಞಾನಿ ಕಳವಳ

ರಸ್ತೆ ನಿರ್ಮಾಣಕ್ಕೆ ಗೊಟ್ಟಿಗೆರೆ ಕೆರೆಯ ಜಾಗವನ್ನು ಬಳಸಿಕೊಳ್ಳುವುದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ ಕಳವಳ ವ್ಯಕ್ತಪಡಿಸಿದರು.

‘ಮೊದಲೇ ವಿನಾಶದ ಅಂಚನ್ನು ತಲುಪಿರುವ ಈ ಕೆರೆಯನ್ನು ಸಂಪೂರ್ಣ ನಾಶಪಡಿಸಲಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ತೇವಾಂಶ ಭೂಮಿ ಕಾಯ್ದೆ–2015 ಹಾಗೂ ತೇವಾಂಶ ಭೂಮಿ ಸಂರಕ್ಷಣೆ ಮತ್ತು ನಿರ್ವಹಣೆ ನಿಯಮಗಳು 2016ರ ಪ್ರಕಾರ ಯಾವುದೇ ಕೆರೆಯ ಭೌತಿಕ ಮತ್ತು ರಾಸಾಯನಿಕ ಸಮಗ್ರತೆಗೆ ಧಕ್ಕೆ ಉಂಟು ಮಾಡುವಂತಿಲ್ಲ. ಯಾವುದೇ ಕೆರೆಯ ವಿಸ್ತೀರ್ಣವನ್ನು ಕುಗ್ಗಿಸುವಂತಿಲ್ಲ. ಕೆರೆಗಳ ಮೇಲೆ ರಸ್ತೆ ಹಾಗು ಸೇತುವೆ ನಿರ್ಮಿಸುವುದಕ್ಕೂ ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

*ಒಂದು ಕಾಲದಲ್ಲಿ ಈ ಕೆರೆಗೆ ನೂರಾರು ವಲಸೆ ಹಕ್ಕುಗಳು ಬರುತ್ತಿದ್ದವು. ಈ ಕೆರೆಯ ಗತವೈಭವ ಮರಳುವಂತೆ ಮಾಡಬೇಕೇ ಹೊರತು, ಇದನ್ನು ಮತ್ತಷ್ಟು ಸಾಯಿಸುವುದಲ್ಲ

– ಹರ್ಷ, ಗೊಟ್ಟಿಗೆರೆ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.