ಬೆಂಗಳೂರು: ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ನಡೆಸಿದ್ದ ಆರೋಪಿಗಳನ್ನು ಸನ್ಮಾನಿಸಿರುವುದು ಹಾಗೂ ಬಸವಣ್ಣ ಅವರ ವಚನಗಳನ್ನು ತಿರುಚಿ ಪುಸ್ತಕ ಪ್ರಕಟಿಸಿರುವುದನ್ನು ಖಂಡಿಸಿ ವೀರಶೈವ ಲಿಂಗಾಯತ ಸಮನ್ವಯ ವೇದಿಕೆಯಿಂದ ಇಲ್ಲಿನ ಬಸವೇಶ್ವರ ಪುತ್ಥಳಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
ಮುಖ್ಯಮಂತ್ರಿಯವರ ಸಲಹೆಗಾರ, ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಕೊಲೆ ಹಾಗೂ ಅತ್ಯಾಚಾರ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಪರಿಪಾಟ ನಡೆಯುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕು’ ಎಂದು ಹೇಳಿದರು.
‘ಸಮಾಜದ ಶಾಂತಿಗೆ ಭಂಗ ತಂದವರನ್ನು ಹೀರೊಗಳಂತೆ ಬಿಂಬಿಸಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಸಂಘದ ಪರಿವಾರದ ಕೆಲವು ಅನಾಗರಿಕರು ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದರು. ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಅವರನ್ನು ಆರೋಪ ಮುಕ್ತರಾದಂತೆ ಸನ್ಮಾನಿಸಲಾಗಿದೆ’ ಎಂದು ಹೇಳಿದರು.
ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಮಾತನಾಡಿ, ‘ಈ ರೀತಿಯ ಬೆಳವಣಿಗೆ ನಮ್ಮ ಕುಟುಂಬಕ್ಕೆ ತುಂಬ ನೋವು ತಂದಿದೆ. ಸರ್ಕಾರ ತ್ವರಿತ ನ್ಯಾಯಾಲಯ ಸ್ಥಾಪಿಸಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಬೇಗನೆ ಇತ್ಯರ್ಥ ಪಡಿಸಬೇಕು. ವಿಳಂಬವಾದರೆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಾರೆ’ ಎಂದರು.
ಇದೇ ವೇಳೆ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ವಿಧಾನಸೌಧ ಠಾಣೆ ಪೊಲೀಸರು ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಸಂಚಾಲಕ ಎಂ.ಟಿ.ಸುಭಾಷ್‌ಚಂದ್ರ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕೊಂಡಜ್ಜಿ ಮೋಹನ್, ಕೆ.ಆರ್.ಸುಭಾಷ್, ಕೆ.ಎಸ್. ವಿಮಲಾ, ಅಲಿಬಾಬಾ, ಪಾಲನೇತ್ರ, ದಲಿತ ಸಂಘರ್ಷ ಸಮಿತಿ ವೆಂಕಟೇಶ್, ಮಹಂತೇಶ್, ಪ್ರಕೃತಿ ಪ್ರಸನ್ನ ಹಾಗೂ ಬಸವ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.