ಬೆಂಗಳೂರು: ಹಲವು ಖ್ಯಾತನಾಮರು ಅಧ್ಯಯನ ಮಾಡಿರುವ ಈ ಕಾಲೇಜು ಇಂದಿಗೂ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು.
ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಕಲಾ ಕಾಲೇಜಿಗೆ ವಿದ್ಯಾರ್ಥಿಗಳ ಬೇಡಿಕೆ ಕುಸಿದಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ 20ಕ್ಕೂ ಹೆಚ್ಚು ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿರುವುದು ವಿಶೇಷ.ಇದು ವೈವಿಧ್ಯಗಳಿರುವ ಶೈಕ್ಷಣಿಕ ಸಂಸ್ಥೆಯಾಗಿ ಉಳಿದಿದೆ.
138 ವರ್ಷಗಳ ಇತಿಹಾಸ ಹೊಂದಿರುವ ಈ ಕಾಲೇಜಿನಲ್ಲೇ ಬಂಡಾಯ ಮತ್ತು ಬೂಸಾ ಚಳವಳಿಗಳು ಹುಟ್ಟಿಕೊಂಡಿದ್ದವು. ಇಂತಹ ಹಲವಾರು ಐತಿಹಾಸಿಕ ಘಟನೆಗಳಿಗೆ ಈ ಕಾಲೇಜು ಸಾಕ್ಷಿಯಾಗಿದೆ. ರಾಜ್ಯದಲ್ಲಿನ 440 ಪದವಿ ಕಾಲೇಜುಗಳಲ್ಲಿ 330 ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ ದೊರೆತಿದೆ. ರಾಜ್ಯದಲ್ಲೇ ಈ ಕಾಲೇಜಿಗೆ ಮಾತ್ರ ’ನ್ಯಾಕ್ ಎ+’ (ಸಿಜಿಪಿಎ 3.29) ಮಾನ್ಯತೆ ದೊರೆತಿದೆ. ಕಾಲೇಜಿನಲ್ಲಿರುವ ಮೂಲಸೌಕರ್ಯ, ಬೋಧನೆ, ವಿವಿಧ ಚಟುವಟಿಕೆಗಳಿಂದ ಈ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಿಎ, ಬಿ.ಕಾಂ, ಬಿಬಿಎಂ ಹಾಗೂ ಎಂ.ಎ. ಮತ್ತು ಎಂ.ಕಾಂ. ಪದವಿಗಳಿಗೆ ಇಲ್ಲಿ ಪ್ರವೇಶ ನೀಡಲಾಗುತ್ತಿದೆ. ಸದ್ಯ ಎರಡು ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಾರೆ. ಇವರಲ್ಲಿ ಶೇ 65ಕ್ಕೂ ಹೆಚ್ಚು ವಿದ್ಯಾರ್ಥಿನಿಯರು. 2023–24ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಈಗಲೇ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನೂ ಪ್ರವೇಶ ಪಡೆಯಲು ಸಾಕಷ್ಟು ಕಾಲಾವಕಾಶ ಇರುವುದರಿಂದ ಪ್ರವೇಶ ಪಡೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ಪ್ರಾಧ್ಯಾಪಕರು ಹೇಳುತ್ತಾರೆ.
ಐದೂವರೆ ಎಕರೆ ಪ್ರದೇಶದಲ್ಲಿ ವಿಶಾಲವಾದ ಆವರಣದಲ್ಲಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಬೆಳವಣಿಗೆಯಾಗುವ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ಈ ಕಾಲೇಜಿನ 200 ಮೀಟರ್ ಅಂತರದಲ್ಲೇ ಮೂರು ವಿಶ್ವವಿದ್ಯಾಲಯಗಳು ಆವರಿಸಿಕೊಂಡಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಚೈತನ್ಯ ದೊರೆತಂತಾಗಿದೆ.
ಹಲವು ವಿದ್ಯಾರ್ಥಿಗಳು ಕಾಲೇಜಿನ ಅವಧಿ ಬಳಿಕ ಅರೆಕಾಲಿಕ ಉದ್ಯೋಗದಲ್ಲೂ ತೊಡಗಿದರೆ, ಇನ್ನು ಹಲವರು ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗುತ್ತಾರೆ. ಹೀಗಾಗಿ, ಈ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು ಹಲವರಿಗೆ ಅನುಕೂಲಕರವಾಗಿದೆ.
ಇಲ್ಲಿನ ಶಿಕ್ಷಕರು ಮತ್ತು ಹಳೆಯ ವಿದ್ಯಾರ್ಥಿಗಳಿಂದ ₹15 ಲಕ್ಷ ಮೊತ್ತದ ನಿಧಿ ಸ್ಥಾಪಿಸಲಾಗಿದೆ. ಈ ಮೊತ್ತದಿಂದ ದೊರೆಯುವ ಬಡ್ಡಿಯಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತಿದೆ.
ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಮತ್ತು ಗ್ರಂಥಾಲಯಕ್ಕೆ ಪ್ರತ್ಯೇಕವಾದ ಕಟ್ಟಡ ಅಗತ್ಯವಿದೆ. ಜತೆಗೆ ಅತ್ಯುತ್ತಮ ಸಭಾಂಗಣ ನಿರ್ಮಿಸಬೇಕಾಗಿದೆ.
ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಾತಾವರಣ ಇದೆ. ಬೋಧನೆಯೂ ಉತ್ತಮವಾಗಿದೆ. ಇಲ್ಲಿ ಎಲ್ಲ ಸೌಲಭ್ಯಗಳಿವೆ. ಜತೆಗೆ ಇಲ್ಲಿ ಅತಿ ಕಡಿಮೆ ಶುಲ್ಕವಿದೆ.ಪವನ್‌ಕುಮಾರ್ ಬಿಎ 2ನೇ ವರ್ಷದ ವಿದ್ಯಾರ್ಥಿ
ಕಾಲೇಜಿನ ಕ್ಯಾಂಪಸ್ ಉತ್ತಮವಾಗಿದೆ. ಎಲ್ಲ ರೀತಿಯಲ್ಲೂ ಅನುಕೂಲಕರವಾಗಿದೆ. ಶೈಕ್ಷಣಿಕ ಚಟುವಟಿಕೆಗಳ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಪ್ರಾಮುಖ್ಯತೆ ನೀಡಲಾಗುತ್ತಿದೆ.ಭೀಮಮ್ಮ ಬಿಎ 2ನೇ ವರ್ಷದ ವಿದ್ಯಾರ್ಥಿನಿ.
‘ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ‘
ಈ ಕಾಲೇಜಿನಲ್ಲಿ ಓದಿದವರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ವರ್ಷ ಈ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. 2016ರಲ್ಲಿ ಮಾತ್ರ ಸ್ವಲ್ಪಮಟ್ಟಿಗೆ ಕುಸಿದಿತ್ತು. ಈಗ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ನಮ್ಮ ಕಾಲೇಜಿನಲ್ಲೇ ಅತ್ಯುತ್ತಮ ಪ್ರಾಧ್ಯಾಪಕರಿದ್ದಾರೆ. ಅವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಜತೆಗೆ ಬಿಸಿಎ ಕೋರ್ಸ್ ಆರಂಭಿಸಲಾಗುವುದು – ಡಾ.ಪಿ.ಟಿ. ಶ್ರೀನಿವಾಸ ನಾಯಕ ಪ್ರಾಂಶುಪಾಲ
ಕಾಲೇಜಿನ ವಿಶೇಷಗಳು
* 51 ಕಾಯಂ ಬೋಧ ನಾ ಸಿಬ್ಬಂದಿ
* ₹1.5 ಕೋಟಿ ವೆಚ್ಚದ ಮಲ್ಟಿಸ್ಪೆಷಾಲಿಟಿ ಜಿಮ್
* ಅತ್ಯುತ್ತಮ ಗ್ರಂಥಾಲಯ
* ಎನ್‌ಸಿಸಿ ಘಟಕಗಳು
* ಕ್ರೀಡಾ ಸೌಲಭ್ಯಗಳು
* ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ
* ಹೆಣ್ಣುಮಕ್ಕಳಿಗೆ ಸರ್ಕಾರದಿಂದ ಬೋಧನಾ ಶುಲ್ಕ ವಿನಾಯಿತಿ
* ಪದವಿ ಜತೆಗೆ ಸರ್ಟಿಫಿಕೇಟ್ ಕೋರ್ಸ್‌ಗಳು
* ಸಮೀಪದಲ್ಲೇ ಬಸ್ ನಿಲ್ದಾಣ ರೈಲು ನಿಲ್ದಾಣ ಮೆಟ್ರೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.