ಬೆಂಗಳೂರು: ‘ಸಾರ್ವಜನಿಕರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನೇ ನಮ್ಮ ಉದ್ಯಮ ಆಧರಿಸಿದೆ. ಇದಕ್ಕೆ ನಿರ್ಬಂಧ ಹೇರಿದರೆ ಹಾನಿಯಾಗಲಿದೆ’ ಎಂದು ಎಕ್ಸ್ ಕಾರ್ಪ್ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ‘ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮ 14ರಲ್ಲಿ ಸಕಾರಣ ಉಲ್ಲೇಖಿಸಬೇಕು ಎಂದು ಹೇಳಿರುವಾಗ ಮರುಪರಿಶೀಲನಾ ಆದೇಶವು ಅತಿ ಗೋಪ್ಯ ವಿಚಾರ ಹೇಗಾಗುತ್ತದೆ. ನಮ್ಮದು ವಾಕ್ ಸ್ವಾತಂತ್ರ್ಯ ಆಧರಿಸಿದ ಉದ್ಯಮ. ಆದರೆ, ವಾಕ್ ಸ್ವಾತಂತ್ರ್ಯಕ್ಕೆ ವೇದಿಕೆ ಕಲ್ಪಿಸುವುದಕ್ಕೆ ಹಾನಿ ಮಾಡಲಾಗಿದೆ. ಹೀಗಾದರೆ, ನಾವು ಹೇಗೆ ಉದ್ಯಮ ನಡೆಸಬೇಕು‘ ಎಂದು ಪ್ರಶ್ನಿಸಿದರು. ಅಂತೆಯೇ, ‘ಖಾತೆಗಳನ್ನು ಸ್ಥಗಿತಗೊಳಿಸಿರುವ ಆದೇಶದ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಬೇಕು‘ ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ನಿಮ್ಮ ನಿಲುವು ಏನೆಂಬುದನ್ನು ತಿಳಿಸಿ‘ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.
ಕೆಲವರ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರುವರಿ ಮತ್ತು 2022ರ ಅವಧಿಯಲ್ಲಿ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸ ಲಾಗಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿ ದಂಡ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.