ADVERTISEMENT

ವಿದ್ಯಾರ್ಥಿವೇತನ ನೀಡದ ಸರ್ಕಾರ: ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 11:30 IST
Last Updated 24 ಜೂನ್ 2023, 11:30 IST

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ವಿವಿಧ ನೆಪ ಹೇಳಿ, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದೇ ಸರ್ಕಾರ ವಂಚನೆ ಮಾಡಿದೆ ಎಂದು ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ.

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಲ್ಲಿ ಅನುಮೋದನೆಗೊಂಡವರಲ್ಲಿ ಕೆಲವರಿಗಷ್ಟೇ ವಿದ್ಯಾರ್ಥಿ ವೇತನ ನೀಡಿದೆ. ಎಸ್‌ಸಿ ವಿಭಾಗದಲ್ಲಿ 2018–19ರಲ್ಲಿ 1,03,582, 2019–20ರಲ್ಲಿ 1,13,568, 2020–21ರಲ್ಲಿ 54,630, 2021–22ರಲ್ಲಿ 57,863 ಹಾಗೂ 2022–23ರಲ್ಲಿ 1,29,029 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿಲ್ಲ ಎಂದು ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ವೇಣುಗೋಪಾಲ್‌ ಮೌರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೇ ರೀತಿ ಐದು ವರ್ಷಗಳಲ್ಲಿ ಒಟ್ಟು ಎಸ್‌ಟಿ ಸಮುದಾಯದ 2,87,783, ಮೂರು ವರ್ಷಗಳಲ್ಲಿ ಒಬಿಸಿ ಸಮುದಾಯದ 26,92,023 ವಿದ್ಯಾರ್ಥಿಗಳಿಗೆ ವೇತನ ನೀಡಲು ಬಾಕಿ ಇದೆ. ಎಸ್‌ಸಿ,ಎಸ್‌ಟಿ, ಹಿಂದುಳಿದ ವರ್ಗದ ಮಕ್ಕಳು ವಿದ್ಯಾಭ್ಯಾಸ ಮಾಡಬಾರದು ಎಂಬ ಹುನ್ನಾರ ಇದರಲ್ಲಿ ಅಡಗಿದೆ ಎಂದು ದೂರಿದರು.

ADVERTISEMENT

ವಸತಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿಲ್ಲ. ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೂ ಇದೇ ರೀತಿ ವಿದ್ಯಾರ್ಥಿ ವೇತನ ನೀಡದೇ ವಂಚಿಸಲಾಗಿದೆ. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ವಿದ್ಯಾರ್ಥಿ ವೇತನ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಸಂತಕುಮಾರ್‌ ಬಿ.ಜಿ., ಬಸವರಾಜ್ ಮತ್ತಿತರರಿದ್ದರು.

undefined undefined

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.