ಬೆಂಗಳೂರು: ಪದವಿ ವಿಷಯಗಳ ಉತ್ತರ ಪತ್ರಿಕೆಗಳನ್ನು ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳೇ ಗೌಪ್ಯವಾಗಿ ಮೌಲ್ಯಮಾಪನ ನಡೆಸಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಜಯಲಕ್ಷ್ಮಿ ಎನ್. ಅವರ ಹೆಸರಿನಲ್ಲಿಯೇ ಈ ಮೌಲ್ಯಮಾಪನ ನಡೆದಿರುವುದು ಸಂಶಯಗಳನ್ನು ಹುಟ್ಟುಹಾಕಿದೆ.
ವಿಕ್ಟೋರಿಯಾ ಆಸ್ಪತ್ರೆಗಳ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕಾಲೇಜು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಅಧೀನದಲ್ಲಿದೆ. ಕಾಲೇಜಿನ ಎರಡನೇ ಮಹಡಿಯಲ್ಲಿರುವ ಮಕ್ಕಳ ಪ್ರಯೋಗಾಲಯದಲ್ಲಿ ಕಳೆದ ಮಾ.26ರಂದು ಇಲ್ಲಿನ ಇಬ್ಬರು ಪದವಿಯ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಜಮ್ಮು ಮತ್ತು ಕಾಶ್ಮೀರದ ಬಾಬಾ ಗುಲಾಮ್ ಶಾ ಬಾದ್‌ಶಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಸಿದ್ದಾರೆ. ಅನುಮಾನಗೊಂಡ ಸಹ ಪ್ರಾಧ್ಯಾಪಕರು ದಿಢೀರ್ ಭೇಟಿ ನೀಡಿ, ಪರಿಶೀಲಿಸಿದಾಗ ಜಯಲಕ್ಷ್ಮಿ ಎನ್. ಅವರ ಹೆಸರಿನಲ್ಲಿ ಮೌಲ್ಯಮಾಪನ ನಡೆಸುತ್ತಿರುವುದು ತಿಳಿದುಬಂದಿದೆ. ಈ ವಿದ್ಯಾರ್ಥಿಗಳೂ ತಪ್ಪೊಪ್ಪಿಕೊಂಡಿದ್ದು, ಪ್ರಾಧ್ಯಾಪಕರು ಘಟನೆಯ ವಿಡಿಯೊ ಮಾಡಿದ್ದಾರೆ.
ಪ್ರಾಧ್ಯಾಪಕರ ಪರಿಶೀಲನೆ ವೇಳೆ ವಿದ್ಯಾರ್ಥಿಗಳು ಸಮಾಜ ವಿಜ್ಞಾನ, ಸಂಶೋಧನೆ ಮತ್ತು ಸಂಖ್ಯಾಶಾಸ್ತ್ರ ವಿಷಯಗಳ ಹಲವು ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಕಾಲೇಜಿನ ಐವರು ಸಹ ಪ್ರಾಧ್ಯಾಪಕರು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಎಂಸಿಆರ್‌ಐ ಡೀನ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.
ಉತ್ತರ ಪತ್ರಿಕೆ ವಶಕ್ಕೆ: ಜಯಲಕ್ಷ್ಮಿ ಎನ್. ಅವರು ಮಕ್ಕಳ ಶುಶ್ರೂಷೆ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಮೌಲ್ಯಮಾಪನ ನಡೆಸುತ್ತಿದ್ದ ವಿದ್ಯಾರ್ಥಿಗಳು ಇದೇ ವಿಭಾಗದವರಾಗಿದ್ದಾರೆ. ಪ್ರಯೋಗಾಲಯಕ್ಕೆ ಭೇಟಿ ನೀಡಿದ ಸಹ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ, ‘ಈ ರೀತಿ ಕೃತ್ಯ ಮಾಡುತ್ತೀರಾ’ ಎಂದು ದಬಾಯಿಸಿದ್ದಾರೆ. ಜಯಲಕ್ಷ್ಮಿ ಅವರ ಸೂಚನೆ ಅನುಸಾರ ನಾವು ಮೌಲ್ಯಮಾಪನ ಮಾಡಿದ್ದೇವೆ ಎಂದು ವಿದ್ಯಾರ್ಥಿನಿಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆ ವೇಳೆ ಅಲ್ಲಿದ್ದ ಉತ್ತರ ಪತ್ರಿಕೆಗಳನ್ನು ವಶಕ್ಕೆ ಪಡೆದುಕೊಂಡ ಪ್ರಾಧ್ಯಾಪಕರು, ಬಿಎಂಸಿಆರ್‌ಐ ಡೀನ್ ಗಮನಕ್ಕೆ ತಂದಿದ್ದಾರೆ.
‘ಕಾಲೇಜಿನ ಎರಡನೇ ಮಹಡಿಗೆ ಹೋಗುವಾಗ ಪ್ರಯೋಗಾಲಯಕ್ಕೆ ಬೀಗ ಹಾಕಿರಲಿಲ್ಲ. ಒಳಗಡೆ ಯಾರೋ ಇರುವುದರ ಬಗ್ಗೆ ಸಂದೇಹ ವ್ಯಕ್ತವಾಯಿತು. ಒಳಗೆ ಹೋಗಿ ಪರಿಶೀಲಿಸದಾಗ ವಿದ್ಯಾರ್ಥಿನಿಯರು ಮೌಲ್ಯಮಾಪನ ನಡೆಸುತ್ತಿರುವುದು ತಿಳಿಯಿತು. ಕಾಲೇಜಿನಲ್ಲಿ ದುರಾಚಾರ, ದುರಾಡಳಿತ ನಡೆಯುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಹಿರಿತನ ಕಡೆಗಣಿಸಿ ಹುದ್ದೆ?
ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ 2023ರ ಸೆ.30ರಂದು ಜಯಲಕ್ಷ್ಮಿ ಎನ್. ಅವರನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನೇಮಕ ಮಾಡಿದೆ. ಆದರೆ, ಹಿರಿತನ ಕಡೆಗಣಿಸಲಾಗಿದೆ ಎಂದು ಕಾಲೇಜಿನ ಪ್ರಾಧ್ಯಾಪಕಿ ಜಿ. ನಾಗರತ್ನಮ್ಮ ಅವರು ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಆರು ವರ್ಷ ಕಿರಿಯರಿಗೆ ಈ ಹುದ್ದೆ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಶಾಸಕ
ಸಿ.ಬಿ. ಸುರೇಶ್ ಬಾಬು ಅವರೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದು, ಸೇವಾ ಹಿರಿತನವನ್ನು ಪರಿಗಣಿಸಿ ಜಿ. ನಾಗರತ್ನಮ್ಮ ಅವರನ್ನು ಪ್ರಾಂಶುಪಾಲ ಹುದ್ದೆಗೆ ನೇಮಕ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
‘ತನಿಖಾ ತಂಡದಿಂದ ವರದಿ ಸಲ್ಲಿಕೆ’
‘ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆ ಮೌಲ್ಯ ಮಾಪನ ನಡೆಸಿರುವುದು ಗಮನಕ್ಕೆ ಬಂದಿದೆ. ಬಿಎಂಸಿಆರ್‌ಐ ಸಂಸ್ಥೆಯಿಂದ ತನಿಖಾ ತಂಡವನ್ನು ರಚಿಸಿದ್ದು, ತನಿಖಾ ತಂಡವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ವರದಿಯು ಪರಿಶೀಲನಾ ಹಂತದಲ್ಲಿ ಇದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.