ಬೆಂಗಳೂರು: ‘ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸುವಲ್ಲಿ ಸರ್ಕಾರಗಳ ವಿಫಲತೆಯೂ ಕಾರಣ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಕೃಷಿ ಮೇಳದ ಮೂರನೇ ದಿನದ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು.
‘ಬರಗಾಲ, ನೀರಿನ ಅಭಾವ, ಅಕಾಲಿಕ ಮಳೆ, ಜತೆಗೆ ಆಡಳಿತದ ಕಾರಣವೂ ಇದೆ. ಕೃಷಿ ಕ್ಷೇತ್ರದ ಸುಧಾರಣೆಗೆ ಈ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ರೈತರು ಕೃಷಿ ವಿಧಾನವನ್ನೇ ಬದಲಿಸಬೇಕು. ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಹೊಸ ಬಗೆಯ ಬೆಳೆ ಬೆಳೆಯಬೇಕು’ ಎಂದರು.
‘ದೇಶ ಇಂದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಹಾಲು ಉತ್ಪಾದನೆಯಲ್ಲಿ ಗುಜರಾತ್‌ಗೆ ಸರಿಸಮಾನವಾಗಿ ನಿಂತಿದೆ’ ಎಂದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ‘ಇಂದು ಬೆಳೆಯ ಉತ್ಪಾದನೆಯ ಮುಂದಿನ ಹಂತಗಳ ಬಗ್ಗೆ ಯೋಚಿಸಬೇಕಿದೆ. ಕೃಷಿ ಕ್ಷೇತ್ರವು ಕಾರ್ಮಿಕರ ಸಮಸ್ಯೆ ಎದುರಿಸುತ್ತಿದೆ. ಖರ್ಚು ಕಡಿಮೆ ಮಾಡಿ ಹೆಚ್ಚು ಉತ್ಪಾದನೆ ಮತ್ತು ಬೆಲೆ ಪಡೆಯುವುದು ಗುರಿಯಾಗಬೇಕು. ಆಯೋಗವು ಹಲವು ಶಿಫಾರಸ್ಸುಗಳನ್ನು ಸರ್ಕಾರಕ್ಕೆ ನೀಡಿದೆ. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬೆಲೆಯ ವಿಚಾರದಲ್ಲೂ ರೈತರಿಗೆ ಮುಂದೆ ಒಳ್ಳೆಯದಾಗಲಿದೆ’ ಎಂದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಗತಿಪರ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.