ADVERTISEMENT

ಸಮುದಾಯಗಳ ಮಧ್ಯೆ ಕಂದಕ ಸೃಷ್ಟಿ: ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 23:20 IST
Last Updated 13 ಏಪ್ರಿಲ್ 2024, 23:20 IST
<div class="paragraphs"><p>ಬೆಂಗಳೂರಿನಲ್ಲಿ ಶನಿವಾರ ಸಮುದಾಯ ಕರ್ನಾಟಕ ಯೋಜಿಸಿದ್ದ ‘ಸಂವಿಧಾನದ ಉಳಿವಿಗಾಗಿ ಸಂಸ್ಕೃತಿಕ ಪ್ರತಿಶೋಧ’ ಕಾರ್ಯಕ್ರಮದಲ್ಲಿ ಜನಾರ್ಧನ, ಅಗ್ರಹಾರ ಕೃಷ್ಣಮೂರ್ತಿ, ರಾಜಪ್ಪ ದಳವಾಯಿ, ಮೀನಾಕ್ಷಿ ಬಾಳಿ, ಮನೋಜ್ ವಾಮಂಜೂರು ಪಾಲ್ಗೊಂಡಿದ್ದರು </p></div>

ಬೆಂಗಳೂರಿನಲ್ಲಿ ಶನಿವಾರ ಸಮುದಾಯ ಕರ್ನಾಟಕ ಯೋಜಿಸಿದ್ದ ‘ಸಂವಿಧಾನದ ಉಳಿವಿಗಾಗಿ ಸಂಸ್ಕೃತಿಕ ಪ್ರತಿಶೋಧ’ ಕಾರ್ಯಕ್ರಮದಲ್ಲಿ ಜನಾರ್ಧನ, ಅಗ್ರಹಾರ ಕೃಷ್ಣಮೂರ್ತಿ, ರಾಜಪ್ಪ ದಳವಾಯಿ, ಮೀನಾಕ್ಷಿ ಬಾಳಿ, ಮನೋಜ್ ವಾಮಂಜೂರು ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಎಲ್ಲರನ್ನೂ ಸಮಾನವಾಗಿ ಕಾಣುವುದು ಸರ್ಕಾರಗಳ ಕರ್ತವ್ಯ. ಆದರೆ, ಜಾತಿ, ಧರ್ಮ, ಸಮುದಾಯಗಳ ಮಧ್ಯೆ ಸರ್ಕಾರಗಳೇ ಕಂದಕ ಸೃಷ್ಟಿಸುತ್ತಿವೆ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ADVERTISEMENT

ಸಮುದಾಯ ಕರ್ನಾಟಕ ಹಾಗೂ ಸಮಾನಮನಸ್ಕ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಾಂಸ್ಕೃತಿಕ ಚರಿತ್ರೆಯ ಒಳಗೇ ಸಹಿಷ್ಣುತೆಯ ಶಕ್ತಿಯೂ ಅಡಗಿದೆ. ಆದಿಕಾಲದಲ್ಲೂ ಸಮಾನತೆ ಇತ್ತು. ಜನರು ಅನಾಗರಿಕರಾದರೂ ಭೇದ ಇರಲಿಲ್ಲ. ನಾಗರಿಕತೆ ಜತೆಗೇ ಅಸಮಾನತೆಯೂ ಜನ್ಮ ತಾಳಿತು. ಉಡುಪು ಮನುಷ್ಯರ ನಡುವಿನ ಭೇದದ ಚೌಕಟ್ಟು ಸೃಷ್ಟಿಸಿತು ಎಂದರು.

ಕರ್ನಾಟಕ ಸಹಿಷ್ಣುತೆಯ ತವರು. ಜೈನ, ಶೈವ ಧರ್ಮ ಪ್ರವರ್ಧಮಾನಕ್ಕೆ ಕಾರಣವಾಗಿದ್ದು, ರಾಮಾನುಜಾಚಾರ್ಯರಿಗೆ ಆಶ್ರಯ ನೀಡಿದ್ದು ಕರ್ನಾಟಕ. ಬಸವ ತತ್ವ ಆಧಾರದಲ್ಲಿ ಜನ್ಮ ತಾಳಿದ ವೀರಶೈವ ಪರಂಪರೆ, ಶರಣ ಚಳವಳಿ ಕ್ರಾಂತಿಗೆ ನಾಂದಿ ಹಾಡಿತು. ಇಸ್ಲಾಂ, ಕ್ರೈಸ್ತರ ಸಹಬಾಳ್ವೆಗೂ ಪ್ರತೀಕವಾಗಿದೆ. ಅಂತಹ ವಾತಾವರಣವನ್ನು ಉಳಿಸಿಕೊಳ್ಳಬೇಕು, ಮತ್ತೆ ಸಹಿಷ್ಣತೆಯ ನೆಲೆಯಾಗಿಸಬೇಕು. ಪಂಪ ಮಹಾಕವಿ ಆಶಯದಂತೆ ‘ಮನುಷ್ಯ ಕುಲ ತಾನೊಂದೆ ವಲಂ’ ಎನ್ನುವುದು ಮೂಲಮಂತ್ರವಾಗಬೇಕು ಎಂದು ಹೇಳಿದರು.

‘ಕೊಡುವ ದಾನವನ್ನೆಲ್ಲಾ ಪಡೆದು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಯಾರೇ ನೆರವು ಕೇಳಿದರೂ, ಕೊಡುವ ಭರವಸೆಯನ್ನಷ್ಟೇ ನೀಡಬೇಕು. ಜನರು ನೆರವಿನ ನಿರೀಕ್ಷೆಯಲ್ಲೇ ಜೀವನ ಕಳೆಯಬೇಕು–ಇದು ಶಕುನಿ ದುರ್ಯೋಧನನಿಗೆ ಹೇಳಿಕೊಟ್ಟ ಸಂದೇಶ. ಭಾರತದ ಚುನಾವಣಾ ಬಾಂಡ್‌ ಕಥೆಯೂ ಇದೇ ಆಗಿದೆ’ ಎಂದರು.  

ರಾಜಪ್ಪ ದಳವಾಯಿ ರಚನೆಯ, ಶಶಿಧರ್ ಭಾರಿಘಾಟ್‌ ನಿರ್ದೇಶನದ ‘ಜನ ಸತ್ತಿಲ್ಲ’ ಕಿರು ನಾಟಕವನ್ನು ‘ಬೆಂಗಳೂರು ಸಮುದಾಯ’ದ ಸದಸ್ಯರು ಪ್ರಸ್ತುತಪಡಿಸಿದರು.

ಸಮುದಾಯ ಕರ್ನಾಟಕದ ಗೌರವಾಧ್ಯಕ್ಷ ಜನಾರ್ಧನ (ಜನ್ನಿ) ಪ್ರಾಸ್ತವಿಕ ಮಾತನಾಡಿದರು. ಸಾಹಿತಿ ರಾಜಪ್ಪ ದಳವಾಯಿ, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ಬಾಳಿ, ಚಿಂತಕ ಶಿವಸುಂದರ್, ಸಮುದಾಯ ಕರ್ನಾಟಕದ ಅಧ್ಯಕ್ಷ ಜೆ.ಸಿ. ಶಶಿಧರ್, ಪ್ರಧಾನ ಕಾರ್ಯದರ್ಶಿ ಮನೋಜ್‌ ವಾಮಂಜೂರು, ವಲಯ ಕಾರ್ಯದರ್ಶಿ ರವಿಂದ್ರನಾಥ ಸಿರಿವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.