ಬೆಂಗಳೂರು: ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಾರ್ಮಿಕ ನರೇಶ್ (25) ಕೊಲೆ ಪ್ರಕರಣ ಸಂಬಂಧ ಆರೋಪಿ ಮಾರಿಮುತ್ತುನನ್ನು ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ನರೇಶ್ ಅವರನ್ನು ಮಾರ್ಚ್ 24ರಂದು ಬೆಳಿಗ್ಗೆ ಕೊಲೆ ಮಾಡಲಾಗಿತ್ತು. ಪತ್ನಿ ಮಹಾದೇವಿ ನೀಡಿದ್ದ ದೂರು ಆಧರಿಸಿ ಮಾರಿಮುತ್ತುನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು. ‘ಆರೋಪಿ ಮಾರಿಮುತ್ತು, ಅಪರಾಧ ಹಿನ್ನೆಲೆಯುಳ್ಳವ. ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಜೈಲು ವಾಸ ಅನುಭವಿಸಿ ಬಂದಿದ್ದ’ ಎಂದರು.
‘ಮಾರಿಮುತ್ತು, ನರೇಶ್ ನಡುವೆ ಸ್ನೇಹವಿತ್ತು. ಇಬ್ಬರೂ ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಬಾರ್‌ಗೆ ಹೋಗಿದ್ದರು. ಭವಿಷ್ಯ ಹೇಳುವುದಾಗಿ ಮಾರಿ ಮುತ್ತು ಕೈ ಹಿಡಿದುಕೊಂಡಿದ್ದ ನರೇಶ್, ‘ನಿನಗೆ ಹೆಚ್ಚು ಚಟಗಳಿವೆ. ಹುಡುಗಿಯರ ಸಹವಾಸ ಹೆಚ್ಚಿದೆ. ಕೆಲವರ್ಷಗಳಲ್ಲಿಯೇ ನೀನು ಸಾಯುತ್ತೀಯಾ’ ಎಂದಿದ್ದ. ಸಿಟ್ಟಾದ ಮಾರಿಮುತ್ತು ಜಗಳ ತೆಗೆದಿದ್ದ.’
‘ಜಗಳ ಮಾಡುತ್ತಲೇ ಇಬ್ಬರೂ ಬಾರ್‌ನಿಂದ ಹೊರಗೆ ಬಂದಿದ್ದರು. ಪಾದಚಾರಿ ಮಾರ್ಗದಲ್ಲಿ ನರೇಶ್ ಮೇಲೆ ಹಲ್ಲೆ ಮಾಡಿದ್ದ ಮಾರಿಮುತ್ತು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಪರಾರಿಯಾಗಿದ್ದ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.