ಬೆಂಗಳೂರು: ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆಯಡಿ ನಿರ್ಮಿಸುವ ಮನೆಗಳ ಘಟಕ ವೆಚ್ಚವನ್ನು ಕಡಿಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ನಿರ್ಮಿಸುವ ಮನೆಗಳಿಗೆ ತಲಾ ₹ 7.10 ಲಕ್ಷ ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗಾಗಿ ನಿರ್ಮಿಸುವ ಮನೆಗಳಿಗೆ ತಲಾ ₹ 7.90 ಲಕ್ಷ ಘಟಕ ವೆಚ್ಚ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ಅನುಕ್ರಮವಾಗಿ ₹ 6 ಲಕ್ಷ ಹಾಗೂ ₹ 6.50 ಲಕ್ಷಕ್ಕೆ ಇಳಿಕೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ’ ಎಂದರು.
ಪ್ರತಿ ಮನೆ ನಿರ್ಮಾಣದ ಘಟಕ ವೆಚ್ಚ ₹ 10 ಲಕ್ಷ ತಲುಪಲಿದೆ. ಆದರೆ, ಬಡವರಿಗೆ ಹೊರೆಯಾಗಬಾರದು ಎಂಬ ಕಾರಣದಿಂದ ಮೂಲಸೌಕರ್ಯಗಳ ಬಾಬ್ತು ₹ 2.80 ಲಕ್ಷವನ್ನು ಸರ್ಕಾರವೇ ಭರಿಸುತ್ತಿದೆ. ಈ ಯೋಜನೆಯಡಿ ಮನೆ ಒದಗಿಸುವಂತೆ ಕೋರಿ ಒಟ್ಟು 45,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಪ್ರಸಕ್ತ ವರ್ಷ ಐದು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. 3.5 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. 2023ರ ಮಾರ್ಚ್ ಒಳಗೆ ಹೆಚ್ಚುವರಿಯಾಗಿ ಐದು ಲಕ್ಷ ಮನೆಗಳ ನಿರ್ಮಾಣ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಯವರು ಗುರಿ ನಿಗದಿಪಡಿಸಿದ್ದಾರೆ ಎಂದರು.
ಫೆಬ್ರುವರಿಗೆ ಉದ್ಘಾಟನೆ: ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಫೆಬ್ರುವರಿಗೆ ಉದ್ಘಾಟನೆ ಮಾಡಲಾಗುವುದು. ರಾಯಚೂರು ವಿಮಾನ ನಿಲ್ದಾಣ ಕಾಮಗಾರಿಗೆ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 200 ಎಕರೆ ಜಮೀನು ಅಗತ್ಯವಿದೆ. ಈವರೆಗೆ 170 ಎಕರೆ ಲಭ್ಯವಾಗಿದ್ದು, ಇನ್ನೂ 30 ಎಕರೆ ಜಮೀನು ಗುರುತಿಸಲು ಸೂಚನೆ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.