ADVERTISEMENT

ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 15:52 IST
Last Updated 25 ಡಿಸೆಂಬರ್ 2023, 15:52 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ಬೆಂಗಳೂರು: ‘ಹಿಜಾಬ್‌ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಕುರಿತು ಸರ್ಕಾರ ಯೋಚಿಸಿಯೇ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಹಿಜಾಬ್‌ ನಿಷೇಧ ಆದೇಶ ಹಿಂಪಡೆಯಲು ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಾವು ಆ ಬಗ್ಗೆ ಯೋಚಿಸಿಯೇ ಇಲ್ಲ. ಮಾಧ್ಯಮಗಳೇ ಇದನ್ನು ದೊಡ್ಡ ವಿಷಯವನ್ನಾಗಿ ಮಾಡುತ್ತಿವೆ’ ಎಂದರು.

‘ಹಿಜಾಬ್‌ ನಿಷೇಧ ವಿಷಯ ಚರ್ಚೆಗೆ ಬರುತ್ತಿದೆ ಎಂದು ಮಾಧ್ಯಮದವರೇ ಹೇಳುತ್ತಿದ್ದಾರೆ. ಸರ್ಕಾರದ ಮುಂದೆ ಅಂತಹ ಪ್ರಸ್ತಾವ ಎಲ್ಲಿದೆ’ ಎಂದು ಪ್ರಶ್ನಿಸಿದರು.

ADVERTISEMENT

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಭೇಟಿ ಕುರಿತು ಕೇಳಿದಾಗ, ‘ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕೆಲವು ಯೋಜನಾ ಪ್ರಾಧಿಕಾರಗಳಿವೆ. ಅವುಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನಾಮನಿರ್ದೇಶನ ಕುರಿತು ಚರ್ಚಿಸಿದ್ದೇವೆ. ಸಚಿವರನ್ನು ವೀಕ್ಷಕರನ್ನಾಗಿ ನಿಯೋಜಿಸಿರುವ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳ ಕುರಿತೂ ಚರ್ಚಿಸಿದ್ದೇವೆ’ ಎಂದರು.

ನಿಗಮ, ಮಂಡಳಿ ನಾಮನಿರ್ದೇಶನಕ್ಕೆ ಪಕ್ಷದ ವರಿಷ್ಠರಿಗೆ ಪಟ್ಟಿ ನೀಡಲಾಗಿದೆ. ಯಾವುದೇ ಕ್ಷಣದಲ್ಲಿ ನೇಮಕಾತಿ ಆದೇಶ ಹೊರಬೀಳಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪರಿಹಾರಕ್ಕಾಗಿ ರೈತರು ಬರಗಾಲವನ್ನು ಬಯಸುತ್ತಾರೆ’ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿಕೆ ಕುರಿತು ಪ್ರಶ್ನಿಸಿದಾಗ, ‘ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.