ಬೆಂಗಳೂರು: ಜಾಲ ಹೋಬಳಿ ಶೆಟ್ಟಿಗೆರೆ ಗ್ರಾಮದಲ್ಲಿರುವ ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಜಮೀನು ಪರರ ಪಾಲಾಗಿದ್ದು, ಕರ್ತವ್ಯ ಲೋಪ ಎಸಗಿ ಅಕ್ರಮಕ್ಕೆ ಸಹಕರಿಸಿದ್ದ ಆರೋಪದಡಿ ಭೂ ಮಾಪಕ ರಂಗಸ್ವಾಮಿ (45) ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ಭೂ ಮಾಪನಾ ಇಲಾಖೆಯ ಅಧಿಕಾರಿ ಇ. ಪ್ರಕಾಶ್ ಅವರು ಕೆಲ ದಾಖಲೆ ಸಮೇತ ದೂರು ನೀಡಿದ್ದಾರೆ. ರಂಗಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಹುಡುಕಾಟ ಆರಂಭಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿ ರಂಗಸ್ವಾಮಿ, ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ಕಚೇರಿಯಲ್ಲಿ ಸರ್ಕಾರಿ ಭೂ ಮಾಪಕನಾಗಿ ಕೆಲಸ ಮಾಡುತ್ತಿದ್ದ. ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಸರ್ವೇ ನಂಬರ್ 80ರಲ್ಲಿರುವ ಕ್ರಯಕ್ಕೆ ಪಡೆದಿರುವ 24 ಎಕರೆ ಜಮೀನು ದುರಸ್ತಿಪಡಿಸುವುದಕ್ಕಾಗಿ ರಚನಾ ಎಂಬುವವರು 2006ರ ಮಾರ್ಚ್ 31ರಂದು ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ್ದ ಅಂದಿನ ತಹಶೀಲ್ದಾರ್, ಜಮೀನು ಅಳತೆಗೆ ಆದೇಶ ಹೊರಡಿಸಿದ್ದರು.’
‘ಸರ್ವೇ ನಂಬರ್ 80ರ ಜಮೀನು, ಸರ್ಕಾರಿ ಕರಾಬು ಜಮೀನು. ಈ ಸಂಬಂಧ ಲಭ್ಯವಿರುವ ಸರ್ಕಾರಿ ಕಡತಗಳನ್ನು ಸಂಗ್ರಹಿಸಿ ಅಳತೆ ಮಾಡಿ ವರದಿ ನೀಡಬೇಕಿತ್ತು. ದಾಖಲೆಗಳು ಕಾಣೆಯಾಗಿದ್ದರಿಂದ, ಪುನರ್ ಸೃಷ್ಟಿಸಿ ಅಳತೆ ಮಾಡಬೇಕಿತ್ತು. ಕರ್ತವ್ಯಲೋಪ ಎಸಗಿದ್ದ ಆರೋಪಿ ರಂಗಸ್ವಾಮಿ, ಅರ್ಜಿದಾರರು ನೀಡಿದ್ದ ದಾಖಲೆಗಳನ್ನೇ ಅಂತಿಮವೆಂದು ಪರಿಗಣಿಸಿ ಅಳತೆ ಮಾಡಿ ವರದಿ ಸಲ್ಲಿಸಿದ್ದರು. ಇದರಿಂದಾಗಿ ಸರ್ಕಾರಿ ಜಮೀನು, ಖಾಸಗಿ ವ್ಯಕ್ತಿಗಳ ಪಾಲಾಗಿತ್ತು. ಈ ಅಂಶ ದೂರಿನಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಸರ್ವೇ ನಂ. 80ರಲ್ಲಿ 1ರಿಂದ 6 ಬ್ಲಾಕ್‌ಗಳಿವೆ. ಕೆಲ ಜಮೀನು ಅರ್ಜಿದಾರರಿಗೆ ಸೇರಿತ್ತು. ಉಳಿದ ಜಮೀನು ಸರ್ಕಾರದ್ದಾಗಿತ್ತು. ಎಲ್ಲ ಜಮೀನು ಅರ್ಜಿದಾರದ್ದೇ ಎಂಬುದಾಗಿ ರಂಗಸ್ವಾಮಿ ವರದಿ ನೀಡಿದ್ದರು. ರಂಗಸ್ವಾಮಿಯ ಕರ್ತವ್ಯಲೋಪದಿಂದಾಗಿ ಸರ್ಕಾರಕ್ಕೆ ಕೋಟಿಗೂ ಹೆಚ್ಚು ನಷ್ಟವಾಗಿದೆ. ಈತ ನೀಡಿದ್ದ ವರದಿಯಿಂದಾಗಿ ನಕಲಿ ದಾಖಲೆಗಳು ಸೃಷ್ಟಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ, ಪರರ ಪಾಲಾದ ಸರ್ಕಾರಿ ಜಮೀನು ಎಷ್ಟು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ಹೇಳಿವೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿ: ‘ರಂಗಸ್ವಾಮಿ ವಿರುದ್ಧ ಜ. 24ರಂದು ಪ್ರಕರಣ ದಾಖಲಾಗಿದೆ. ಇದಾದ ನಂತರ ಆರೋಪಿ ವಾಸಸ್ಥಳದಿಂದ ಪರಾರಿಯಾಗಿದ್ದು, ಕೆಲಸಕ್ಕೂ ಗೈರಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.