ADVERTISEMENT

ಸರ್ಕಾರಿ ಹಣ: ಬಹುಹಂತದ ನಿಗಾಕ್ಕೆ ನಿರ್ದೇಶನ

ಎಲ್ಲ ಇಲಾಖಾ ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:10 IST
Last Updated 29 ಜೂನ್ 2024, 16:10 IST

ರಜನೀಶ್‌ ಗೋಯಲ್‌
ರಜನೀಶ್‌ ಗೋಯಲ್‌   

ಬೆಂಗಳೂರು: ಸಾರ್ವಜನಿಕ ಉದ್ದಿಮೆಗಳು, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳು ಮತ್ತು ಅರೆ ಸ್ವಾಯತ್ತ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಮೇಲೆ ಬಹುಹಂತದ ನಿಗಾ ಇರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಣದ ಅಕ್ರಮ ವರ್ಗಾವಣೆ ಮಾಡಿರುವ ಹಗರಣ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಆರ್ಥಿಕ ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ. ಈ ಕಾರಣದಿಂದ ಎಲ್ಲ ಇಲಾಖಾ ಮುಖ್ಯಸ್ಥರಿಗೂ ಮಂಗಳವಾರ ಸುತ್ತೋಲೆ ಹೊರಡಿಸಿರುವ ಗೋಯಲ್‌, ಸರ್ಕಾರಿ ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳಲ್ಲೂ ನಿಗಾ ಇರಿಸುವಂತೆ ನಿರ್ದೇಶನ ನೀಡಿದ್ದಾರೆ.

ಚಾಲ್ತಿ ಖಾತೆ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿದಂತೆ ಎಲ್ಲ ಬ್ಯಾಂಕ್‌ ಖಾತೆಗಳ ಆರಂಭಿಕ ಮತ್ತು ಅಂತ್ಯದ ಶಿಲ್ಕಿನ ಕುರಿತು ಪ್ರತಿ ತಿಂಗಳು ಸಮಗ್ರ ಪರಿಶೀಲನೆ ನಡೆಸಬೇಕು. ನಿಶ್ಚಿತ ಠೇವಣಿಯ ಮೊತ್ತ, ಅವಧಿ ಪೂರ್ಣಗೊಳ್ಳುವುದು (ಮೆಚ್ಯುರಿಟಿ), ಬಡ್ಡಿ ಪಾವತಿ ಬಗ್ಗೆಯೂ ನಿಗಾ ಇರಿಸಬೇಕು. ಈ ಎಲ್ಲ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಕುರಿತು ಮೂರನೇ ವ್ಯಕ್ತಿಗಳಿಂದ ತಪಾಸಣೆ ಮಾಡಿಸಬೇಕು. ಆಂತರಿಕ ಲೆಕ್ಕಪರಿಶೋಧಕರಿಂದ ಈ ಬಗ್ಗೆ ವರದಿ ಪಡೆದು ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಬೇಕು. ಆಯಾ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಕುರಿತು ಬ್ಯಾಂಕ್‌ಗಳಿಂದ ದಾಖಲೆಗಳನ್ನು ಪಡೆದು, ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಹೊರ ಊರುಗಳಲ್ಲಿ ಹೂಡಿಕೆ ನಿರ್ಬಂಧ: ಯಾವುದೇ ಸಂಸ್ಥೆಗಳು ತಮ್ಮ ಕೇಂದ್ರ ಸ್ಥಾನದ ನಗರದಿಂದ ಹೊರಗಿರುವ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಹೂಡಿಕೆಯ ಮೊತ್ತವನ್ನು ಆಯಾ ಸಂಸ್ಥೆಗಳ ಹೆಸರಿನಲ್ಲೇ ತೆರೆದ ಖಾತೆಗಳಿಗೆ ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಆರ್‌ಟಿಜಿಎಸ್‌ ಮೂಲಕ ಮಾತ್ರ ವರ್ಗಾಯಿಸಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.

ನಿಶ್ಚಿತ ಠೇವಣಿಗಳನ್ನು ಒಂದೇ ಖಾತೆಯಲ್ಲಿ ನಿರ್ವಹಿಸಬೇಕು. ಮೊತ್ತವನ್ನು ಒಂದಕ್ಕಿಂತ ಹೆಚ್ಚು ಭಾಗಗಳಾಗಿ ವಿಂಗಡಿಸಿ ಹೂಡಿಕೆ ಮಾಡುವಂತಿಲ್ಲ. ಹೂಡಿಕೆ ಪತ್ರಗಳನ್ನು ಆಯಾ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರು ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೃಢೀಕರಿಸುವುದು ಕಡ್ಡಾಯ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಆಯಾ ಸಂಸ್ಥೆಗಳು ಹೂಡಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಒಂದು ಪ್ರತ್ಯೇಕ ಕಡತದಲ್ಲಿ ನಮೂದಿಸಬೇಕು. ಪ್ರತಿ ತಿಂಗಳು ಆಂತರಿಕ ಲೆಕ್ಕಪರಿಶೋಧಕರ ಮುಂದೆ ಆ ಕಡವನ್ನು ಹಾಜರುಪಡಿಸಬೇಕು. ಅಕ್ರಮ ತಡೆಗೆ ಜಂಟಿ ಖಾತೆಗಳಲ್ಲಿ ವಹಿವಾಟು ನಡೆಸಬೇಕು. ಈ ವಹಿವಾಟುಗಳ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಬೇಕು ಎಂದು ಸೂಚಿಸಿದ್ದಾರೆ.

ಇಲಾಖಾ ಮುಖ್ಯಸ್ಥರಿಗೂ ಹೊಣೆ

ನಿಗಮ ಮಂಡಳಿ ಸ್ವಾಯತ್ತ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಆಯಾ ಇಲಾಖೆಗಳ ಕಾರ್ಯದರ್ಶಿಗಳು ಈ ಎಲ್ಲ ಸಂಸ್ಥೆಗಳ ಹಣಕಾಸು ವಹಿವಾಟಿನ ಮೇಲೆ ನಿಗಾ ಇರಿಸಬೇಕು. ತಮ್ಮ ಇಲಾಖೆಗಳ ವ್ಯಾಪ್ತಿಯ ಸಂಸ್ಥೆಗಳ ಬ್ಯಾಂಕ್‌ ಖಾತೆಗಳ ವಿವರ ಸಂಗ್ರಹಿಸುವುದರ ಜತೆಗೆ ಅವುಗಳನ್ನು ಖಜಾನೆ ಜತೆ ಜೋಡಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.

ಕಾರ್ಯದರ್ಶಿಗಳು ನಿಯಮಿತವಾಗಿ ಆಯಾ ಸಂಸ್ಥೆಗಳ ಹಣಕಾಸು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಾರದಿಂದ ನಾಮನಿರ್ದೇಶನ ಹೊಂದಿದ ನಿರ್ದೇಶಕರು ಕೂಡ ಆಂತರಿಕ ಲೆಕ್ಕ ಪರಿಶೋಧನಾ ವರದಿಗಳು ಸೇರಿದಂತೆ ಎಲ್ಲ ವಿವರಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.