ಬೆಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಕೇಂದ್ರೀಯ ರಸ್ತೆ ನಿಧಿ (ಸಿಆರ್‌ಎಫ್) ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ತಿಳಿಸಿದರು.
ಶುಕ್ರವಾರ ನಡೆದ ಹುಬ್ಬಳ್ಳಿ– ಧಾರವಾಡ ಎಲಿವೇಟೆಡ್ ಕಾರಿಡಾರ್, ಧಾರವಾಡ ಮತ್ತು ಕಲಘಟಗಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಭೂಮಿಪೂಜೆ ಸಮಾರಂಭದಲ್ಲಿ ವರ್ಚ್ಯುಯಲ್ ಮೂಲಕ ಭಾಗವಹಿಸಿ ಮಾತನಾಡಿದ ಅವರು, ‘ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮತ್ತು ಇತರ ರಸ್ತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದರು.
ತುಮಕೂರು– ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ. ಬಾಕಿ ಇರುವ ಎಲ್ಲ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಅರಣ್ಯ ಮತ್ತು ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡುವುದು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದ ಎಲ್ಲ ಅನುಮತಿಗಳನ್ನೂ ತ್ವರಿತವಾಗಿ ನೀಡಲಾಗುವುದು ಎಂದು ಹೇಳಿದರು.
ನಿತಿನ್ ಗಡ್ಕರಿ ಅವರು ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಗೆ ಆಸಕ್ತಿ ತಳೆದಿದ್ದಾರೆ. ಈ ಉದ್ದೇಶಕ್ಕಾಗಿ ₹ 1.16 ಲಕ್ಷ ಕೋಟಿ ಮೊತ್ತವನ್ನು ಒದಗಿಸುವ ಪ್ರಸ್ತಾವವನ್ನು ರೂಪಿಸಿದ್ದಾರೆ. ಈಗಾಗಲೇ ₹ 10,000 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಉದ್ಘಾಟಿಸಿದ್ದಾರೆ ಎಂದರು.
ಮಂಜೂರಾತಿಯ ಭರವಸೆ: ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ‘ಎರಡು ಗಂಟೆಗಳ ಕಾಲ ನಿತಿನ್ ಗಡ್ಕರಿ ಅವರ ಜತೆ ಸಭೆ ನಡೆದಿದೆ. ರಾಜ್ಯ ಸರ್ಕಾರ ಸಲ್ಲಿಸಿರುವ ಎಲ್ಲ ಪ್ರಸ್ತಾವಗಳಿಗೂ ಮಂಜೂರಾತಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಮುಖ್ಯಮಂತ್ರಿಯವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ್ ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.