ADVERTISEMENT

ಗೌರಿ–ಗಣೇಶ ಹಬ್ಬದ ಸಿದ್ಧತೆ ಜೋರು: ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ

ಬಟಾಣಿ ಕೆ.ಜಿಗೆ ₹ 260, ಕೊತ್ತಂಬರಿ ಕಟ್ಟಿಗೆ ₹60, ಬೆಳ್ಳುಳ್ಳಿ ಕೆ.ಜಿಗೆ ₹340

ಖಲೀಲಅಹ್ಮದ ಶೇಖ
Published 5 ಸೆಪ್ಟೆಂಬರ್ 2024, 1:01 IST
Last Updated 5 ಸೆಪ್ಟೆಂಬರ್ 2024, 1:01 IST
ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಬುಧವಾರ ಕಂಡುಬಂದ ಖರೀದಿ ಭರಾಟೆ –ಪ್ರಜಾವಾಣಿ ಚಿತ್ರ: ರಂಜು ಪಿ.
ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಬುಧವಾರ ಕಂಡುಬಂದ ಖರೀದಿ ಭರಾಟೆ –ಪ್ರಜಾವಾಣಿ ಚಿತ್ರ: ರಂಜು ಪಿ.   

ಬೆಂಗಳೂರು: ಗೌರಿ ಗಣೇಶ ಹಬ್ಬವನ್ನು ಸಂಭ್ರಮ–ಸಡಗರದಿಂದ ಆಚರಿಸಲು ನಗರದ ಜನತೆ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಬೇಕಾಗಿರುವ ವಿಗ್ರಹ, ಹೂವು, ಹಣ್ಣು, ಪೂಜಾ ಸಾಮಗ್ರಿಗಳು, ಅಗತ್ಯ ವಸ್ತುಗಳ ಖರೀದಿ ಸಂಭ್ರಮ ಬುಧವಾರವೇ ಜೋರಾಗಿತ್ತು.

ವರಮಹಾಲಕ್ಷ್ಮಿ ಹಬ್ಬದ ವೇಳೆ ಗಗನಕ್ಕೇರಿದ್ದ ಹೂವು –ಹಣ್ಣು ಬೆಲೆ ಈಗ ಸ್ವಲ್ಪ ಇಳಿದಿದೆ. ಗೌರಿ–ಗಣೇಶ ಹಬ್ಬಕ್ಕೆ ಕೆಲ ತರಕಾರಿಗಳ ಬೆಲೆ ಹೆಚ್ಚಿದರೆ, ಹಣ್ಣುಗಳ ಬೆಲೆಯಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ವರ ಮಹಾಲಕ್ಷ್ಮಿ ಹಬ್ಬದಲ್ಲಿದ್ದ ಹೂವಿನ ದರ ಹೆಚ್ಚಿತ್ತು, ಈಗ ತುಸು ಇಳಿದಿದೆ.

ಕೆ.ಆರ್‌.ಮಾರುಕಟ್ಟೆಯಲ್ಲಿ ಬೆಳಗಿನ ಜಾವದ ವೇಳೆಗೇ ಜನ ಜಮಾಯಿಸಿದ್ದರು. ಚಿಕ್ಕಪೇಟೆಯ ಅವೆನ್ಯೂ ರಸ್ತೆ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಿತ್ತು. ಸಂಚಾರ ದಟ್ಟಣೆಗೆ ಪೊಲೀಸರು ಹರಸಾಹಸ ಪಡುತ್ತಿದ್ದರು.

ADVERTISEMENT

‘ಬಟಾಣಿ ಪ್ರತಿ ಕೆ.ಜಿಗೆ ₹260ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ₹ 60, ಹಸಿಮೆಣಸಿನಕಾಯಿ ಹಾಗೂ ಬೀನ್ಸ್‌ ₹80ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುತ್ತಿವೆ. ತರಕಾರಿಗಳ ಪೂರೈಕೆ ಹೆಚ್ಚಿದೆ. ಹೆಚ್ಚಿನ ತರಕಾರಿಗಳ ಬೆಲೆ ಸ್ಥಿರವಾಗಿದೆ’ ಎಂದು ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳಾದ ಅಕ್ರಂ, ಸುನಿಲ್‌ ತಿಳಿಸಿದರು. 

ಕನಕಾಂಬರ ಈಗಲೂ ದುಬಾರಿ: ‘ವರಮಹಾಲಕ್ಷ್ಮಿ ಹಬ್ಬದ ಅವಧಿಯಲ್ಲಿನ ದರಕ್ಕೆ ಹೋಲಿಸಿದರೆ ಗೌರಿ ಗಣೇಶನ ಹಬ್ಬಕ್ಕೆ ಹೂವಿನ ದರ ಕಡಿಮೆಯಾಗಿದೆ. ಕನಕಾಂಬರ ಮಾತ್ರ ಕೆ.ಜಿಗೆ ₹3 ಸಾವಿರದಂತೆ ಮಾರಾಟವಾಗುತ್ತಿದ್ದು, ಈಗಲೂ ದುಬಾರಿಯಾಗಿಯೇ ಉಳಿದಿದೆ.

ವರಮಹಾಲಕ್ಷ್ಮಿ ಹಬ್ಬದ ವೇಳೆ ಪ್ರತಿ ಕೆ.ಜಿ. ಕನಕಾಂಬರ ಹೂವಿನ ದರ ₹ 4,000 ತಲುಪಿತ್ತು. ನಂತರ ಪ್ರತಿ ಕೆ.ಜಿ.ಗೆ ₹ 800ಕ್ಕೆ ಕುಸಿದಿತ್ತು. ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಮತ್ತೆ ಭಾರಿ ಜಿಗಿತ ಕಂಡಿದೆ’ ಎಂದು ಕೆ.ಆರ್. ಮಾರುಕಟ್ಟೆಯ ಹೂವಿನ ವ್ಯಾಪಾರಿಗಳಾದ ಶಬ್ಬೀರ್‌ ಮತ್ತು ಸುಹಾಸ್‌ ಹೇಳಿದರು.

‘ಮಲ್ಲಿಗೆ ಹೂವು ಕೆ.ಜಿಗೆ ₹600ರಂತೆ ಮಾರಾಟವಾಗುತ್ತಿದೆ. ಹೂವಿನ ದರಗಳಲ್ಲಿ ಗುರುವಾರ ಕೊಂಚ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಅವರು ತಿಳಿಸಿದರು.

ಗರಿಕೆ, ಬೇಲದ ಹಣ್ಣು, ಎಕ್ಕದ ಹೂವಿನಹಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿತ್ತು. ಜತೆಗೆ ಬಾಳೆಕಂದು, ಹೂವಿನಹಾರ, ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಹೆಚ್ಚಾಗಿತ್ತು. ಎಕ್ಕದ ಹಾರಕ್ಕೆ ₹50, ಗರಿಕೆ ಕಟ್ಟು ಒಂದಕ್ಕೆ ₹30 ಇತ್ತು. ಪ್ರದೇಶವಾರು ದರದಲ್ಲಿ ವ್ಯತ್ಯಾಸವಿದೆ.

ಗಾಂಧಿ ಬಜಾರ್, ಜಯನಗರ, ಬಸವನಗುಡಿ, ಬನಶಂಕರಿ, ರಾಜಾಜಿನಗರ, ಮಲ್ಲೇಶ್ವರ ಸೇರಿ ನಗರದ ವಿವಿಧ ಭಾಗಗಳಲ್ಲಿ ಹೂವು, ಹಣ್ಣಿನ ತಾತ್ಕಾಲಿಕ ಮಳಿಗೆಗಳು, ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವ ಅಂಗಡಿಗಳು ತಲೆ ಎತ್ತಿವೆ.

ಮಾರುಕಟ್ಟೆಗೆ ಬಗೆ–ಬಗೆಯ ಗೌರಿ-ಗಣೇಶ ಮೂರ್ತಿಗಳು ಬಂದಿವೆ. ಬುಧವಾರದಿಂದಲೇ ಗೌರಿ, ಗಣೇಶ ಮೂರ್ತಿಗಳ ಮಾರಾಟದ ಭರಾಟೆ ಜೋರಾಗಿದೆ. ಮತ್ತೊಂದೆಡೆ ಗೌರಿ ಹಬ್ಬ ಆಚರಿಸುವವರು ಗಜಗೌರಿ, ಮಡಿಗೌರಿ ಮತ್ತಿತರ ಬಗೆಯ ಗೌರಿಯ ಮೂರ್ತಿಗಳನ್ನು ಮಹಿಳೆಯರು ಖರೀದಿಸಿದರು.

ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಗೌರಿ–ಗಣೇಶ ಹಬ್ಬದ ಅಂಗವಾಗಿ ಬುಧವಾರ ಸಾರ್ವಜನಿಕರು ತರಕಾರಿ ಖರೀದಿಸಿದರು   ಪ್ರಜಾವಾಣಿ ಚಿತ್ರ: ರಂಜು ಪಿ.

ಕೊತ್ತಂಬರಿ ಕಟ್ಟಿಗೆ ₹60

ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಸತತ ಮಳೆಯಿಂದಾಗಿ ಸೊಪ್ಪಿನ ಬೆಳೆಗಳಿಗೆ ಹಾನಿಯಾಗಿದ್ದು ಪರಿಣಾಮ ಗ್ರಾಹಕರನ್ನೂ ಬಾಧಿಸತೊಡಗಿದೆ. ಕೊತ್ತಂಬರಿ ಪ್ರತಿ ಕಟ್ಟಿಗೆ ₹60ರಂತೆ ಮಾರಾಟವಾಗುತ್ತಿದೆ. ಕೆಲದಿನಗಳ ಹಿಂದೆ ಪ್ರತಿ ಕಟ್ಟಿಗೆ ₹20 ಇತ್ತು. ಮಾರುಕಟ್ಟೆಗೆ ಆವಕ ಕುಗ್ಗಿರುವುದು ಬೆಲೆ ಏರಿಕೆಗೆ ಕಾರಣ ಎಂದು ಎಪಿಎಂಸಿ ವರ್ತಕರು ಮತ್ತು ಕೆ. ಆರ್.ಮಾರ್ಕೆಟ್‌ ಸೊಪ್ಪಿನ ವ್ಯಾಪಾರಿಗಳು ತಿಳಿಸಿದರು. ‘ಮಳೆ ಕಾರಣಕ್ಕೇ ಸೊಪ್ಪಿನ ಬೆಲೆ ಏರಿದೆ. ನಾಟಿ ಕೊತ್ತಂಬರಿ ಆವಕ ಕಡಿಮೆಯಾಗಿದೆ. ದಪ್ಪನೆಯ ಕಟ್ಟು ₹50–60 ಹಾಗೂ ಸಬ್ಬಸಿಗೆ ಮತ್ತು ಮೆಂತ್ಯೆ ಪ್ರತಿ ಕಟ್ಟಿಗೆ ₹30 ಇತ್ತು’ ಎಂದು ಸೊಪ್ಪಿನ ವ್ಯಾಪಾರಿ ಗಿರಿಜಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.