ADVERTISEMENT

ಮನೆ ಬಾಡಿಗೆಯ ಪಾಲಾದ ‘ಗೃಹಜ್ಯೋತಿ’ ಉಳಿತಾಯ

ಬಾಲಕೃಷ್ಣ ಪಿ.ಎಚ್‌
Published 14 ಮೇ 2024, 23:30 IST
Last Updated 14 ಮೇ 2024, 23:30 IST
ಗೃಹಜ್ಯೋತಿ
ಗೃಹಜ್ಯೋತಿ   

ಬೆಂಗಳೂರು: ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ ಹಣ ಉಳಿತಾಯವಾಗುತ್ತದೆ ಎಂಬ ಖುಷಿಯಲ್ಲಿದ್ದ ಕೆಲವು ಬಾಡಿಗೆ ಮನೆಯ ವಾಸಿಗಳಿಗೆ, ಮನೆ ಮಾಲೀಕರು ಬಾಡಿಗೆ ಹೆಚ್ಚಿಸುವ ಮೂಲಕ ‘ಶಾಕ್‌‘ ನೀಡುತ್ತಿದ್ದಾರೆ. ‘ಗೃಹಜ್ಯೋತಿ’ಯಿಂದ ಉಳಿತಾಯವಾದ ಹಣ ಬಾಡಿಗೆಯ ಪಾಲಾಗುತ್ತಿದೆ..!

ಗೃಹಜ್ಯೋತಿಯಿಂದಾಗಿ ಕೆಲವು ಗ್ರಾಹಕರಿಗೆ ವಿದ್ಯುತ್ ಬಿಲ್ ಶೂನ್ಯವಾಗಿದ್ದರೆ, ಇನ್ನೂ ಕೆಲವರಿಗೆ ತುಂಬಾ ಕಡಿಮೆ ಬಿಲ್ ಬರುತ್ತಿದೆ. ಇದನ್ನು ಗಮನಿಸಿದ ಕೆಲವು ಮನೆ ಮಾಲೀಕರು, ಬಾಡಿಗೆಯನ್ನು ದಿಢೀರನೆ ಹೆಚ್ಚಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ವಾರ್ಷಿಕ ಬಾಡಿಗೆ ದರವನ್ನು ಕರಾರಿನಲ್ಲಿ ಉಲ್ಲೇಖಿಸಿರುವುದಕ್ಕಿಂತ ಹೆಚ್ಚು ಏರಿಕೆ ಮಾಡುತ್ತಿದ್ದಾರೆ. ಇದರಿಂದ ಬಾಡಿಗೆದಾರರು ಗೊಂದಲಕ್ಕೆ ಸಿಲುಕಿದ್ದಾರೆ.

‘ನಾನು ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿದ್ದೇನೆ. ಆರಂಭದಲ್ಲೇ ಐದು ವರ್ಷ ಬಾಡಿಗೆ ಹೆಚ್ಚಿಸುವುದಿಲ್ಲ ಎಂದು ಭರವಸೆ ನೀಡಿದ್ದರು. ಮೊದಲು ತಿಂಗಳಿಗೆ ₹500ರಿಂದ ₹ 600 ವಿದ್ಯುತ್‌ ಬಿಲ್‌ ಬರುತ್ತಿತ್ತು. ‘ಗೃಹಜ್ಯೋತಿ‘ ಯೋಜನೆ ಜಾರಿಯ ನಂತರ ₹50ರ ಒಳಗೆ ಬಿಲ್‌ ಬರತೊಡಗಿತು. ಇದು ತಿಳಿಯುತ್ತಿದ್ದಂತೆ ಮಾಲೀಕರು ₹500 ಬಾಡಿಗೆ ಹೆಚ್ಚಿಸಿದರು. ಅವರು ನೀಡಿದ್ದ ಭರವಸೆ ನೆನಪಿಸಿದರೂ ಕೇಳಲಿಲ್ಲ. ಈಗ ಎಲ್ಲ ಕಡೆ ಬಾಡಿಗೆ ಜಾಸ್ತಿಯಾಗಿದೆ. ನಿಮಗೇನು ನಷ್ಟವಾಗುವುದಿಲ್ಲ. ಕರೆಂಟ್‌ ಬಿಲ್‌ನಲ್ಲಿ ಉಳಿಯುವುದಿಲ್ವೆ ಎಂದು ನೇರವಾಗಿ ಹೇಳಿದ್ದರು’ ಎಂದು ನಾಗಸಂದ್ರದ ಭಾನುಪ್ರಕಾಶ್‌ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮನೆ ಬಾಡಿಗೆಗೆ ಬರುವಾಗ ಪ್ರತಿ 11 ತಿಂಗಳಿಗೊಮ್ಮೆ ಬಾಡಿಗೆ ದರವನ್ನು ಶೇ 5ರಷ್ಟು ಹೆಚ್ಚಿಸುವುದಾಗಿ ಕರಾರಿನಲ್ಲಿ ಉಲ್ಲೇಖಿಸಲಾಗಿತ್ತು. ಗೃಹಜ್ಯೋತಿಯಿಂದ ಹಣ ಉಳಿತಾಯವಾಗುತ್ತದೆ ಎಂದು ತಿಳಿದ ಮೇಲೆ, ಮಾಲೀಕರು ಬಾಡಿಗೆ ದರವನ್ನು ಏಕಾಏಕಿ ಶೇ 10ಕ್ಕೆ ಏರಿಸಿದ್ದಾರೆ. ಕರಾರಿನಲ್ಲಿರುವುದನ್ನು ನೆನಪಿಸಿದರೆ, ಏನೋ ನೆಪ ಹೇಳುತ್ತಾರೆ. ನಿಮಗೆ ಬಾಡಿಗೆ ಕೊಡಲು ಕಷ್ಟವಾದರೆ, ಬೇರೆ ಮನೆ ನೋಡಿಕೊಳ್ಳಬಹುದು ಎನ್ನುತ್ತಾರೆ‘ ಎಂದು ರಾಜಾಜಿನಗರದ ಬಾಡಿಗೆದಾರರೊಬ್ಬರು ವಿವರಿಸಿದರು. ‘ಈಗ ಬಾಡಿಗೆ ಹೆಚ್ಚಿಸಿದ್ದಾರೆ ಎಂದು ತಕ್ಷಣ ಮನೆ ಬದಲಿಸಲಾಗುವುದಿಲ್ಲ. ಹಾಗೆ ಬದಲಿಸಿದರೆ, ಸುಣ್ಣ–ಬಣ್ಣ ಎಂದು ಠೇವಣಿ ಹಣದಲ್ಲಿ ಒಂದು ತಿಂಗಳ ಬಾಡಿಗೆ ಮುರಿದುಕೊಳ್ಳುತ್ತಾರೆ. ಜೊತೆಗೆ ಮನೆ ಸ್ಥಳಾಂತರದ ಖರ್ಚಿನ ಹೊರೆಯೂ ಇರುತ್ತದೆ’ ಎಂದು ಅವರು ಅಲವತ್ತುಕೊಂಡರು.

ಬೇಸಿಗೆಯ ಬರೆ: ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳಿಗೆ ತಿಂಗಳಿಗೆ ಗರಿಷ್ಠ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಬಳಸಲು ಅವಕಾಶವಿದೆ. ಈ ಫಲಾನುಭವಿಗಳು ಹಿಂದಿನ ತಿಂಗಳ ಬಳಕೆಗಿಂತ 10 ಯೂನಿಟ್‌ ಅಧಿಕ ಬಳಕೆ ಮಾಡಬಹುದು. ಅದಕ್ಕಿಂತ ಹೆಚ್ಚು ಬಳಸಿದರೆ, ಹೆಚ್ಚುವರಿ ಯೂನಿಟ್‌ಗಳ ಬಿಲ್‌ ಪಾವತಿ ಮಾಡಬೇಕು. ಈ ವರ್ಷ ಜನವರಿಯಿಂದ ನಾಲ್ಕು ತಿಂಗಳು ಬಿಸಿಲು ತೀವ್ರವಾಗಿತ್ತು. ಇದರಿಂದ ಮನೆಗಳಲ್ಲಿ ಫ್ಯಾನ್, ಫ್ರಿಜ್‌, ಕೂಲರ್‌ನಂತಹ ಉಪಕರಣಗಳ ಬಳಕೆ ಹೆಚ್ಚಾಗಿ, ವಿದ್ಯುತ್‌ ಬಳಕೆಯೂ ಏರಿಕೆಯಾಗಿದೆ. ವಿದ್ಯುತ್‌ ಬಿಲ್‌ ಕೂಡ ಹೆಚ್ಚಾಗಿದೆ. ಇಂಥ ಪರಿಸ್ಥಿತಿಯಲ್ಲಿ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಿರುವುದು ಇನ್ನಷ್ಟು ಸಂಕಷ್ಟ ಉಂಟು ಮಾಡಿದೆ ಎಂದು ಬಾಡಿಗೆದಾರರು ದೂರಿದರು.

ಅಂಕಿ ಅಂಶ 1.50 ಕೋಟಿ ರಾಜ್ಯದಲ್ಲಿ ‘ಗೃಹಜ್ಯೋತಿ’ ಫಲಾನುಭವಿಗಳು 60 ಲಕ್ಷ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ‘ಗೃಹಜ್ಯೋತಿ’ ಫಲಾನುಭವಿಗಳು 35 ಲಕ್ಷ ಅದರಲ್ಲಿ ಬಿಬಿಎಂ ವ್ಯಾಪ್ತಿಯ ‘ಗೃಹಜ್ಯೊತಿ’ ಫಲಾನುಭವಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.