ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿನ ಎಲ್ಲ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತರಲು ಆದೇಶ ಹೊರಡಿಸಿ ಎರಡು ವರ್ಷಗಳಾದರೂ ಶೇಕಡ 5ರಿಂದ 6ರಷ್ಟು ಮಾತ್ರ ಪ್ರಗತಿ ಸಾಧ್ಯವಾಗಿದೆ. ಇನ್ನೂ ಒಂದು ಕೋಟಿಗೂ ಹೆಚ್ಚು ಆಸ್ತಿಗಳು ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದು, ತೆರಿಗೆ ಸೋರಿಕೆ ಅವ್ಯಾಹತವಾಗಿ ಮುಂದುವರಿದಿದೆ.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಅರ್ಧಕ್ಕಿಂತಲೂ ಹೆಚ್ಚು ಆಸ್ತಿಗಳು ತೆರಿಗೆ ಪಟ್ಟಿಯಿಂದ ಹೊರಗೆ ಉಳಿದಿವೆ. ಎಲ್ಲ ಕೃಷಿಯೇತರ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತಂದು, ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ 2019ರಿಂದ ಸತತವಾಗಿ ಪ್ರಯತ್ನಿಸುತ್ತಿದೆ.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳನ್ನೂ ತೆರಿಗೆ ಪಟ್ಟಿಯಲ್ಲಿ ದಾಖಲಿಸುವುದಕ್ಕಾಗಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2022ರಲ್ಲಿ ಪಂಚತಂತ್ರ 2.0 ತಂತ್ರಾಂಶ ಅಳವಡಿಸಿಕೊಂಡಿತ್ತು. ಬೆಂಗಳೂರು ನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆಸ್ತಿಗಳ ಸಮೀಕ್ಷೆ, ತೆರಿಗೆ ಪಟ್ಟಿಯಲ್ಲಿ ದಾಖಲಿಸುವ ಅಭಿಯಾನವನ್ನು ಪ್ರಾಯೋಗಿಕವಾಗಿ ನಡೆಸಲಾಗಿತ್ತು.
ಸಮೀಕ್ಷೆ ಕಡತಕ್ಕೆ ಸೀಮಿತ: ಎಲ್ಲ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಿ 2019ರಲ್ಲಿ ಆದೇಶ ಹೊರಡಿಸಲಾಗಿತ್ತು. ಆದರೆ, ಯಾವುದೇ ಪ್ರಗತಿ ಆಗಿರಲಿಲ್ಲ. 2022ರ ಆಗಸ್ಟ್‌ನಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಪಂಚಾಯತ್ ರಾಜ್ ಇಲಾಖೆ ಆಯುಕ್ತರು, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಎಲ್ಲ ಕೃಷಿಯೇತರ ಆಸ್ತಿಗಳ ಸಮೀಕ್ಷೆ ನಡೆಸುವಂತೆ ಸೂಚಿಸಿದ್ದರು.
ಎಲ್ಲ ಜಿಲ್ಲೆಗಳಲ್ಲೂ ಆಸ್ತಿಗಳ ಮ್ಯಾನ್ಯುಯಲ್ ಸಮೀಕ್ಷೆ ಪೂರ್ಣಗೊಳಿಸಲಾಗಿದೆ ಎಂಬ ವರದಿಯನ್ನು ಇಲಾಖೆಯ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಆದರೆ, ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಪಟ್ಟಿಗೆ ಸೇರಿದ ಆಸ್ತಿಗಳ ಸಂಖ್ಯೆಯಲ್ಲಿ ದೊಡ್ಡ ಬದಲಾವಣೆಯೇನೂ ಆಗಿಲ್ಲ. 2023ರಲ್ಲಿ ರಾಜ್ಯದ 2,950 ಗ್ರಾಮ ಪಂಚಾಯಿತಿಗಳಲ್ಲಿ 1.32 ಕೋಟಿ ಆಸ್ತಿಗಳು ತೆರಿಗೆ ವ್ಯಾಪ್ತಿಯಲ್ಲಿದ್ದವು. ಈಗ ಆ ಸಂಖ್ಯೆ 1.41 ಕೋಟಿಗೆ ಏರಿಕೆಯಾಗಿದೆ.
‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ 2.5 ಕೋಟಿಗೂ ಹೆಚ್ಚು ಕೃಷಿಯೇತರ ಆಸ್ತಿಗಳಿವೆ. ಅವುಗಳೆಲ್ಲವನ್ನೂ ಗ್ರಾಮ ಪಂಚಾಯಿತಿಗಳ ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶದಿಂದ ಪಂಚತಂತ್ರ 2.0 ತಂತ್ರಾಂಶ ಅಳವಡಿಸಲಾಗಿತ್ತು. ಆಸ್ತಿಗಳ ಸಮೀಕ್ಷೆಯನ್ನೂ ಮಾಡಲಾಗಿತ್ತು. ಆದರೆ, ಇನ್ನೂ ಒಂದು ಕೋಟಿಗೂ ಹೆಚ್ಚಿನ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬಂದಿಲ್ಲ. ಇದರಿಂದ ಗ್ರಾಮ ಪಂಚಾಯಿತಿಗಳಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ವರಮಾನ ಕೈತಪ್ಪುತ್ತಿದೆ’ ಎನ್ನುತ್ತವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಗಳು.
ಕಡತ ನಿರ್ವಹಣೆಗೂ ನಿರಾಸಕ್ತಿ
ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿನ ಆಸ್ತಿಗಳು ಮತ್ತು ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ನಾಲ್ಕು ಪುಸ್ತಕಗಳನ್ನು (ರಿಜಿಸ್ಟರ್) ನಿರ್ವಹಣೆ ಮಾಡಬೇಕು. ಪ್ರತಿ ವರ್ಷವೂ ಹೊಸ ರಿಜಿಸ್ಟರ್ ಬರೆದು ತೆರಿಗೆ ಬೇಡಿಕೆ, ಬಾಕಿ ಮತ್ತು ಸಂಗ್ರಹವನ್ನು ಪರಿಶೀಲಿಸಬೇಕು. ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಈ ರಿಜಿಸ್ಟರ್‌ಗಳ ನಿರ್ವಹಣೆಯೇ ಸಮರ್ಪವಾಗಿ ನಡೆಯುತ್ತಿಲ್ಲ.
‘ನಮೂನೆ 9ಎ (ಆಸ್ತಿ ವಿವರಗಳ ರಿಜಿಸ್ಟರ್), ನಮೂನೆ 9 (ತೆರಿಗೆ ನಿರ್ಧರಣಾ ಪಟ್ಟಿಯ ರಿಜಿಸ್ಟರ್), ನಮೂನೆ 11ಎ (ತೆರಿಗೆ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರಗಳ ರಿಜಿಸ್ಟರ್) ಹಾಗೂ ನಮೂನೆ 11 ಬಿ (ಕ್ರಮಬದ್ಧವಲ್ಲದ ಆಸ್ತಿಗಳ ತೆರಿಗೆ ನಿರ್ಧರಣಾ ಪಟ್ಟಿಯ ರಿಜಿಸ್ಟರ್) ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಲೆಕ್ಕಪರಿಶೋಧನೆಯಲ್ಲಿ ನಿರಂತರವಾಗಿ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಈ ಕಡತಗಳ ನಿರ್ವಹಣೆಯಲ್ಲಿನ ಲೋಪವೂ ಆಸ್ತಿಗಳು ತೆರಿಗೆ ಪಟ್ಟಿಯಿಂದ ಹೊರಗುಳಿಯಲು ಪ್ರಮುಖ ಕಾರಣ’ ಎನ್ನುತ್ತಾರೆ ಅಧಿಕಾರಿಗಳು.
ತೆರಿಗೆ ಸಂಗ್ರಹವೂ ಕುಂಠಿತ
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಏಳು ತಿಂಗಳು ಕಳೆದಿದ್ದು ಗ್ರಾಮ ಪಂಚಾಯಿತಿಗಳ ಆಸ್ತಿ ತೆರಿಗೆ ಸಂಗ್ರಹದಲ್ಲಿ ತೀವ್ರ ಕುಂಠಿತವಾಗಿದೆ. ಪ್ರಸಕ್ತ ವರ್ಷದ ಬೇಡಿಕೆಗೆ ಹೋಲಿಸಿದರೆ ಶೇಕಡ 35ರಷ್ಟು ತೆರಿಗೆ ಸಂಗ್ರಹವಾಗಿದೆ. ಹಿಂಬಾಕಿಯೂ ಸೇರಿದ ಒಟ್ಟು ಬೇಡಿಕೆಗೆ ಹೋಲಿಸಿದರೆ ತೆರಿಗೆ ಸಂಗ್ರಹದ ಪ್ರಮಾಣ ಶೇ 14ರಷ್ಟು ಮಾತ್ರ ಇದೆ. 2024–25ನೇ ಆರ್ಥಿಕ ವರ್ಷದಲ್ಲಿ 5950 ಗ್ರಾಮ ಪಂಚಾಯಿತಿಗಳ ಒಟ್ಟು ಆಸ್ತಿ ತೆರಿಗೆ ಬೇಡಿಕೆ ₹1657.95 ಕೋಟಿ ಇದೆ. ಹಿಂದಿನ ವರ್ಷಗಳ ಬಾಕಿ ₹2412.50 ಕೋಟಿ ಇದೆ. ಒಟ್ಟು ಬೇಡಿಕೆ ₹4070.45 ಕೋಟಿ ಇದ್ದು ಅಕ್ಟೋಬರ್ 25ರವರೆಗೆ ₹579.26 ಕೋಟಿ ತೆರಿಗೆ ಮಾತ್ರ ಸಂಗ್ರಹವಾಗಿದೆ.
‘ಸಮಸ್ಯೆ ಪರಿಹಾರಕ್ಕೆ ಸಮಿತಿ’
‘ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಲು ಹಿರಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಇ–ಸ್ವತ್ತು ವಿಷಯದಲ್ಲಿನ ಸಮಸ್ಯೆಗಳೇ ಈ ಸಮಸ್ಯೆಗೂ ಮೂಲ. ಆಸ್ತಿಗಳ ಸಮೀಕ್ಷೆ ಮತ್ತು ತೆರಿಗೆ ನಿರ್ಧರಣೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಏಳು ತಿಂಗಳಿನಿಂದ ಸತತ ಪರಿಶೀಲನೆ ನಡೆಸುತ್ತಿದ್ದೇವೆ. ಮುಂದಿನ ಆರ್ಥಿಕ ವರ್ಷದ ಆರಂಭದೊಳಗೆ ಸಮಸ್ಯೆ ಪರಿಹರಿಸಲಾಗುವುದು. ಎಲ್ಲ ಆಸ್ತಿಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ವಿಷಯದಲ್ಲಿ ಯಾವುದೇ ರಾಜಿಯೂ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.