ADVERTISEMENT

ಬೆಂಗಳೂರು ನಗರಕ್ಕೆ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’

ಬಹು ಪಾಲಿಕೆಗಳು, ನಗರದ ಎಲ್ಲ ಇಲಾಖೆಗಳ ಆಡಳಿತ ಯಂತ್ರ: ಕರಡು ಮಸೂದೆ

ನವೀನ್‌ ಮಿನೇಜಸ್‌
Published 2 ಜುಲೈ 2024, 19:12 IST
Last Updated 2 ಜುಲೈ 2024, 19:12 IST
   

ಬೆಂಗಳೂರು: ರಾಜ್ಯ ಸರ್ಕಾರದ ಸದ್ಯದ ಯೋಜನೆಯಂತೆಯೇ ಎಲ್ಲವೂ ನಡೆದರೆ, ‌ಬೆಂಗಳೂರು ನಗರಕ್ಕೆ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಹೆಸರಿನ ಹೊಸ ಆಡಳಿತ ವ್ಯವಸ್ಥೆ ರಚನೆಯಾಗಲಿದೆ.

ಇದಕ್ಕೆ ಯೋಜನೆ ಮತ್ತು ಆರ್ಥಿಕ ಶಕ್ತಿಯೂ ಲಭ್ಯವಾಗಲಿದೆ. ಅಲ್ಲದೆ ಬಹು ಪಾಲಿಕೆಗಳು ಹಾಗೂ ಇಲಾಖೆಗಳ ಮೇಲುಸ್ತುವಾರಿ ಜವಾಬ್ದಾರಿ ಇರಲಿದೆ.

ನಾಲ್ಕು ಸದಸ್ಯರ ಸಮಿತಿ ಸಿದ್ಧಪಡಿಸಿರುವ ಕರಡು ಮಸೂದೆಯ ಪ್ರಕಾರ, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರ (ಜಿಬಿಎ) ರಚನೆಯಾಗಲಿದೆ. ಪಾಲಿಕೆ ಸದಸ್ಯರಿಂದ ಆಯ್ಕೆಯಾಗುವ ಮೇಯರ್‌ಗಳು, ಆಯ್ದ ಪಾಲಿಕೆ ಸದಸ್ಯರು, ನಗರದ ಎಲ್ಲ ಶಾಸಕರು, ತಜ್ಞರು  ಸದಸ್ಯರಾಗಿರುತ್ತಾರೆ. ಬೆಸ್ಕಾಂ, ಜಲಮಂಡಳಿ, ನಮ್ಮ ಮೆಟ್ರೊ, ಸಂಚಾರ, ಸಾರಿಗೆ ಇಲಾಖೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಈ ಪ್ರಾಧಿಕಾರದಡಿ ಬರಲಿವೆ.

ADVERTISEMENT

ಹೊಸ ಯೋಜನೆಯಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂ ಬಳಕೆ ಹಾಗೂ ಅಭಿವೃದ್ಧಿ ನಕ್ಷೆಯನ್ನು ಅನುಮೋದಿಸುವ ಅಧಿಕಾರ ಕಳೆದುಕೊಳ್ಳಲಿದೆ. ಹೊಸ ರೂಪ ಹಾಗೂ ಹೆಸರಿನೊಂದಿಗೆ ರಸ್ತೆ, ನೀರುಗಾಲುವೆಯಂತಹ ಬೃಹತ್‌ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುವ ಜವಾಬ್ದಾರಿ ಹೊಂದಲಿದೆ.

ಕರಡು ಮಸೂದೆಯಲ್ಲಿ ಬೆಂಗಳೂರು ಆಡಳಿತ ನಿರ್ವಹಣೆಗೆ ಮೂರು ಹಂತದ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದ್ದು, ದೇಶದಲ್ಲಿಯೇ ಈ ರೀತಿಯ ಆಡಳಿತ ಪ್ರಯೋಗ ಪ್ರಥಮ ಎನಿಸಲಿದೆ. ಜಿಬಿಎ ಪ್ರಥಮ ಹಂತದಲ್ಲಿದ್ದು, 1ರಿಂದ 10 ಪಾಲಿಕೆಗಳು (ಎಷ್ಟು ತೀರ್ಮಾನವಾಗುತ್ತವೋ ಅಷ್ಟು) ದ್ವಿತೀಯ ಹಂತದಲ್ಲಿದ್ದು, 400 ವಾರ್ಡ್‌ಗಳು ಕೊನೆಯ ಹಂತದಲ್ಲಿ ವಿಕೇಂದ್ರೀಕೃತ ಅಧಿಕಾರ ಹೊಂದಿರುತ್ತವೆ. ಈಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರದ್ದಾಗಲಿದೆ.

ಬಿಬಿಎಂಪಿ ಈಗ 708 ಚದರ ಕಿಲೋಮಿಟರ್‌ ಪ್ರದೇಶದಲ್ಲಿ ವ್ಯಾಪಿಸಿದೆ. ಜಿಬಿಎ ವ್ಯಾಪ್ತಿ ಪಾಲಿಕೆಯ ಆಚೆ ಸುಮಾರು 250 ಚದರ ಕಿಲೋಮೀಟರ್‌ ಹೆಚ್ಚಾಗಲಿದೆ. ಎಲೆಕ್ಟ್ರಾನಿಕ್‌ ಸಿಟಿ ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ಪ್ರಾಧಿಕಾರ (ಇಎಲ್‌ಸಿಐಟಿಎ) ಸೇರಿದಂತೆ ಹೊರಭಾಗದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳನ್ನು ಜಿಬಿಎ ವ್ಯಾಪ್ತಿಗೆ ತರಲಾಗುತ್ತದೆ.

ಬಿಡಿಎ ಇದೀಗ ಹೊಂದಿರುವ ಯೋಜನಾ ಅಧಿಕಾರವನ್ನೂ ಹೊಂದಲಿರುವ ಜಿಬಿಎ, ರಾಜ್ಯ ಸರ್ಕಾರ ಪಾಲಿಕೆಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಯಾವ ಪಾಲಿಕೆಗೆ ಎಷ್ಟು ಬಿಡುಗಡೆ ಮಾಡಬೇಕು ಎಂಬುದನ್ನು ನಿರ್ಧರಿಸಲಿದೆ.

ಮೂರು ಹಂತದಲ್ಲಿ ಆಡಳಿತವನ್ನು ಅಳವಡಿಸಿಕೊಳ್ಳುವ ಬದಲು ಬಿಬಿಎಂಪಿಯನ್ನು ವಿಭಜನೆ ಮಾಡಿದರೆ ಯೋಜನೆ ವಿಫಲವಾಗುತ್ತದೆ ಎಂದು ನಾಲ್ಕು ಸದಸ್ಯರ ಸಮಿತಿ ಹೇಳಿದೆ. ದೆಹಲಿಯ ಪಾಲಿಕೆಗಳಲ್ಲಿ ಒಂದು ಸಮೃದ್ಧವಾಗಿದ್ದರೆ ಮತ್ತೆರಡು ಆರ್ಥಿಕ ಸಂಪನ್ಮೂಲವಿಲ್ಲದೆ ಸೊರಗಿದ್ದವು. ಆದರೆ, ಜಿಬಿಎ ಆಡಳಿತದ ಮೇಲ್ಪಂಕ್ತಿಯಲ್ಲಿರುವುದರಿಂದ ಪಾಲಿಕೆಗಳಿಗೆ ಆರ್ಥಿಕ ಅಗತ್ಯಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘ಬೆಂಗಳೂರನ್ನು ಬಿಬಿಎಂಪಿ ನಿರ್ವಹಿಸಲಾಗದು.. ’

‘ಬೆಂಗಳೂರನ್ನು ಬಿಬಿಎಂಪಿ ನಿರ್ವಹಿಸಲು ಸಾಧ್ಯವಿಲ್ಲ. ಬಿಬಿಎಂಪಿ ವ್ಯಾಪ್ತಿ ಮೀರಿ ನಗರ ಬೆಳೆಯುತ್ತಿದೆ. ತ್ಯಾಜ್ಯ ನಿರ್ವಹಣೆ, ನೀರು, ವಿದ್ಯುತ್‌  ಸೇವೆಗಳು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿವೆ. ಆದ್ದರಿಂದ, ಮೂರು ಹಂತದ ಆಡಳಿತವನ್ನು ರಚಿಸಲು ಯೋಜಿಸಲಾಗಿದೆ. ಈ ಬಗ್ಗೆ ಶೀಘ್ರವೇ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.