ಬೆಂಗಳೂರು: ‘ಅತ್ಯಂತ ವೇಗವಾಗಿ ಗಡಿ ಮೀರಿ ಬೆಳೆಯುತ್ತಿರುವ ನಗರವನ್ನು ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ನಗರದ ಸಮರ್ಪಕ ನಿರ್ವಹಣೆ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ ತರಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಜಲಮಂಡಳಿಯು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೌಕರರ ಸಂಘ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಳಗದ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಗರವು ನಾಡಪ್ರಭು ಕೆಂಪೇಗೌಡರು ಹಾಕಿದ್ದ ಗಡಿಯನ್ನು ಮೀರಿ ಬೆಳೆಯುತ್ತಿದೆ. 1.40 ಕೋಟಿ ಜನರನ್ನು ಹೊಂದಿರುವ ನಗರದಲ್ಲಿ, ರಸ್ತೆ, ನೀರು ಸೇರಿ ವಿವಿಧ ಮೂಲಸೌಕರ್ಯ ಒದಗಿಸುವುದು ಸುಲಭವಲ್ಲ. ಇಲ್ಲಿ 1.04 ಕೋಟಿ ವಾಹನಗಳಿದ್ದು, ರಸ್ತೆಗಳ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬೆಂಗಳೂರನ್ನು ಕಾಪಾಡಬೇಕಿದೆ. ಈ ಕಾರಣದಿಂದಾಗಿಯೇ ನಗರದ ಆಡಳಿತ ನಿರ್ವಹಣೆಗೆ ಪ್ರತ್ಯೇಕ ಮಸೂದೆ ತರಲಾಗಿದೆ. ಇದಕ್ಕೆ ಸುಮಾರು 70 ಸಾವಿರ ಸಲಹೆಗಳನ್ನು ಪಡೆಯಲಾಗಿದೆ. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನನ್ನದೇ ಆದ ಹೆಜ್ಜೆ ಗುರುತು ಮೂಡಿಸಬೇಕೆಂದು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದೇನೆ’ ಎಂದು ಹೇಳಿದರು.
‘2006ರಲ್ಲಿ ಯೋಜನೆ ರೂಪಿಸದ ಕಾರಣ ವರ್ತುಲ ರಸ್ತೆಯು ನಗರದ ಒಳಗೆ ಬಂದಿದೆ. ಈಗ ಹೊಸದಾಗಿ 150 ಅಡಿ ಅಗಲದ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಸುಮಾರು ₹25 ಸಾವಿರ ಕೋಟಿ ಖರ್ಚಾಗಲಿದೆ. ಇದಕ್ಕೆ ಪ್ರತ್ಯೇಕ ಕಂಪನಿ ಸ್ಥಾಪಿಸಿ, ನಿರ್ಮಾಣ ಮಾಡಲಾಗುತ್ತದೆ. ಇದನ್ನು ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಎಂದು ಕರೆಯಲಾಗುವುದು’ ಎಂದು ತಿಳಿಸಿದರು.
‘ಕೆಂಪೇಗೌಡರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಅವರು ನೀಡಿದ ಕೊಡುಗೆ ಎಲ್ಲರಿಗೂ ಸಲ್ಲುತ್ತದೆ’ ಎಂದರು.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಮುಂದಿನ 20 ವರ್ಷಗಳಲ್ಲಿ ನಗರದ ಜನಸಂಖ್ಯೆ ಇನ್ನೂ ಒಂದು ಕೋಟಿ ಹೆಚ್ಚಾಗುವ ಸಾಧ್ಯತೆಯಿದೆ. ಆಗ ಸುಮಾರು 2.5 ಕೋಟಿ ಜನರಿಗೆ ಮೂಲಸೌಕರ್ಯಗಳನ್ನು ನೀಡುವ ಜತೆಗೆ ಎದುರಾಗುವ ಜ್ವಲಂತ ಸಮಸ್ಯೆಗಳ ನಿವಾರಣೆಗೂ ಸಜ್ಜಾಗಬೇಕು. ಈ ನಿಟ್ಟಿನಲ್ಲಿ ಕೆಂಪೇಗೌಡರು ನಿರ್ಮಿಸಿದ ಕೆರೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು’ ಎಂದು ಹೇಳಿದರು.
ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾತನಾಡಿದರು.
1.40 ಕೋಟಿ ಜನಸಂಖ್ಯೆಯ ನಗರದಲ್ಲಿ 1.04 ಕೋಟಿ ವಾಹನ ಪ್ರತ್ಯೇಕ ಮಸೂದೆ ತರುವ ಮುನ್ನ ಪಡೆದದ್ದು 70 ಸಾವಿರ ಸಲಹೆ ತಲೆ ಎತ್ತಲಿದೆ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.