ADVERTISEMENT

‘ಹಸಿರು ಪಟ್ಟ’ ಉಳಿಸಿಕೊಂಡ ಹೆಸರಘಟ್ಟ

* ಹುಲ್ಲುಗಾವಲಿಗೆ ಸಂರಕ್ಷಿತ ಮೀಸಲು ಪ್ರದೇಶದ ರಕ್ಷಣೆ * ಹಸಿರು ತಾಣದ ಪೋಷಣೆಗೆ ಇವೆ ಹತ್ತಾರು ದಾರಿ

ಗಾಣಧಾಳು ಶ್ರೀಕಂಠ
Published 15 ಅಕ್ಟೋಬರ್ 2024, 0:14 IST
Last Updated 15 ಅಕ್ಟೋಬರ್ 2024, 0:14 IST
ಹೆಸರಘಟ್ಟ ಹುಲ್ಲುಗಾವಲಿನ ಒಂದು ನೋಟ(ಸಂಗ್ರಹ ಚಿತ್ರ) 
ಹೆಸರಘಟ್ಟ ಹುಲ್ಲುಗಾವಲಿನ ಒಂದು ನೋಟ(ಸಂಗ್ರಹ ಚಿತ್ರ)    

ಗಾಣಧಾಳು ಶ್ರೀಕಂಠ

ಬೆಂಗಳೂರು: ರಾಜಧಾನಿಯ ಒಳಗಡೆಯೇ ಇರುವ 5,010 ಎಕರೆಯಷ್ಟು ಬೃಹತ್‌ ವಿಸ್ತೀರ್ಣದ ಹೆಸರಘಟ್ಟ ಹುಲ್ಲುಗಾವಲಿಗೆ ‘ಸಂರಕ್ಷಿತ ಮೀಸಲು ಪ್ರದೇಶ’ದ ಮಾನ್ಯತೆ ನೀಡುವ ಪ್ರಸ್ತಾವಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ. ಇದರಿಂದಾಗಿ ಬೆಂಗಳೂರಿನ ಮಡಿಲಲ್ಲಿ ನೂರಾರು ಜಾತಿಯ ಪಕ್ಷಿ, ಪ್ರಾಣಿ ಸಂಕುಲಕ್ಕೆ ಆಶ್ರಯ ಕಲ್ಪಿಸುವ ಹಸಿರು ತಾಣವೊಂದನ್ನು ಮಾನವ ಹಸ್ತಕ್ಷೇಪದಿಂದ ರಕ್ಷಿಸಿ, ಅಭಿವೃದ್ಧಿಪಡಿಸಬಹುದಾದ ಅವಕಾಶ ಗರಿಗೆದರಿದೆ.

ಬನ್ನೇರುಘಟ್ಟದ ನಂತರ ಬೆಂಗಳೂರು ಮಹಾನಗರದ ಎರಡನೇ ಅತಿ ದೊಡ್ಡ ಹಸಿರು ತಾಣ (ಗ್ರೀನ್‌ಸ್ಪೇಸ್) ಹೆಸರಘಟ್ಟದ ಹುಲ್ಲುಗಾವಲು. ಅರ್ಕಾವತಿ ನದಿ ಪಾತ್ರದಲ್ಲಿರುವ ಈ ಹುಲ್ಲುಗಾವಲಿನಲ್ಲಿ ದಶಕಗಳ ಹಿಂದೆ ‘ಕಾಂಕ್ರೀಟ್‌ ಕಾಡು’ ನಿರ್ಮಿಸುವ ಪ್ರಯತ್ನಗಳು ಆರಂಭವಾದವು. ಇದರಿಂದ ಆತಂಕಗೊಂಡ ಪರಿಸರ ಕಾರ್ಯಕರ್ತರು, ಹೆಸರಘಟ್ಟ ಉಳಿಸಿ, ಹುಲ್ಲುಗಾವಲನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿ ಅಭಿಯಾನ ಆರಂಭಿಸಿದರು.

ADVERTISEMENT

ದಶಕಗಳ ಹೋರಾಟಕ್ಕೆ ಸ್ಪಂದಿಸಿದ ವನ್ಯಜೀವಿ ಮಂಡಳಿ, ಇತ್ತೀಚೆಗೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972ರ ಸೆಕ್ಷನ್‌ 3ಎ ಪ್ರಕಾರ ಹೆಸರಘಟ್ಟ ಹುಲ್ಲುಗಾವಲನ್ನು ‘ಗ್ರೇಟರ್‌ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಒಪ್ಪಿದೆ. ರಿಯಲ್‌ ಎಸ್ಟೇಟ್‌ ಚಟುವಟಿಕೆ ಮತ್ತು ಅಭಿವೃದ್ಧಿ ಹೆಸರಿನ ಹಸ್ತಕ್ಷೇಪದಿಂದ ಹುಲ್ಲುಗಾವಲನ್ನು ರಕ್ಷಿಸುವ ಹೋರಾಟಕ್ಕೆ ಯಶಸ್ಸು ದೊರಕಿದೆ.

ಹುಲ್ಲುಗಾವಲಿನ ವೈಶಿಷ್ಟ್ಯ: ಹೆಸರಘಟ್ಟ ಹುಲ್ಲುಗಾವಲನ್ನು ಪರಿಸರ ತಜ್ಞರು ಬೆಂಗಳೂರು ಮಹಾನಗರದ ‘ಆಮ್ಲಜನಕದ ತಾಣ’ ಎಂದು ಗುರುತಿಸುತ್ತಾರೆ. ಈ ಪ್ರದೇಶ ವಿಶಿಷ್ಟ ಜೀವಸಂಕುಲ, ಜೀವವೈವಿಧ್ಯದ ತಾಣವಾಗಿರುದೆ.

ನೋಟಕ್ಕೆ ಕೇವಲ ಹುಲ್ಲಿನ ಚಾದರದಂತೆ ಕಾಣುವ ಈ ಪ್ರದೇಶದಲ್ಲಿ, ಹುಲ್ಲಿನ ಪೊದೆಯಲ್ಲೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಸಂಸಾರ ಮಾಡುವ ನೆಲಗುಬ್ಬಿಯಂತಹ ಪಕ್ಷಿ ಪ್ರಭೇದಗಳಿವೆ. ದೊಡ್ಡ ಚುಕ್ಕಿ ಗಿಡುಗ (ಗ್ರೇಟರ್‌ ಸ್ಪಾಟೆಡ್ ಈಗಲ್‌), ಅಳಿವಿನಂಚಿನಲ್ಲಿರುವ ಲೆಸ್ಸರ್‌ ಫ್ಲೋರಿಕಾನ್‌ನಂತಹ ಪಕ್ಷಿಗಳೂ ಇವೆ. ಚಳಿಗಾಲದಲ್ಲಿ ರಷ್ಯಾ, ಮಧ್ಯ ಏಷ್ಯಾ ಭಾಗದಿಂದ ಪಕ್ಷಿಗಳು ವಲಸೆ ಬರುತ್ತವೆ ಎಂದು ಪಕ್ಷಿ ತಜ್ಞರು ಹೇಳುತ್ತಾರೆ. ಕಾಡುಪಾಪ (ಸ್ಲೆಂಡರ್‌ ಲೋರಿಸ್‌), ನೀರು ನಾಯಿ (ಸ್ಮೂತ್‌ ಕೋಟೆಡ್‌ ಒಟ್ಟೆರ್‌) ಅಂತಹ ವನ್ಯಜೀವಿಗಳ ಇರುವಿಕೆಯನ್ನು ತಜ್ಞರು ಗುರುತಿಸಿದ್ದಾರೆ.

ಬೆಂಗಳೂರಿನ ಮೂಲ ಪರಿಸರದಲ್ಲಿದ್ದಂತಹ ಸಸ್ಯ, ಕ್ರೀಟ ಪ್ರಭೇದಗಳು ಹೆಸರಘಟ್ಟದ ಹುಲ್ಲುಗಾವಲಿನಲ್ಲಿವೆ. ಹುಲ್ಲುಗಾವಲಿನ ಒಡಲಲ್ಲಿ, ಸುಮಾರು 1900 ಎಕರೆ ವಿಸ್ತೀರ್ಣದಲ್ಲಿ ಮೂರ್ನಾಲ್ಕು ಕೆರೆಗಳಿವೆ. ಕೆರೆಗಳ ಸುತ್ತ 356  ಎಕರೆ ವಿಸ್ತೀರ್ಣದಲ್ಲಿ ಹುಲ್ಲುಗಾವಲಿದೆ. ಈ ಹುಲ್ಲುಗಾವಲು ಸುತ್ತಲಿನ ಹಳ್ಳಿಗಳ ಜಾನುವಾರುಗಳಿಗೆ ಮೇವು ಒದಗಿಸುವ ಜೊತೆಗೆ, ಮಳೆ ನೀರನ್ನು ಹಿಡಿದು ಭೂಮಿಗೆ ಇಂಗಿಸಿ, ಅಂತರ್ಜಲ ಹೆಚ್ಚಿಸಲು ನೆರವಾಗುತ್ತಿದೆ. ಸುತ್ತ ಮುತ್ತಲಿರುವ ಜಲಮೂಲಗಳಿಗೂ ನೀರಿನ ಆಸರೆಯಾಗುತ್ತಿದೆ. ‘2021–22ರಲ್ಲಿ ಉತ್ತಮ ಮಳೆಯಾಗಿ ಇಲ್ಲಿನ ಕೆರೆಗಳು ತುಂಬಿದಾಗ, ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಕೊಳವೆಬಾವಿಗಳಲ್ಲಿ ಜಲ ಮರುಪೂರಣಗೊಂಡಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿತ್ತು' ಎಂದು ನೆನಪಿಸಿಕೊಳ್ಳುತ್ತಾರೆ ಪರಿಸರ ಕಾರ್ಯಕರ್ತ ಮಹೇಶ್‌ಭಟ್‌.

‘ಮೀಸಲು’ ಅನುಷ್ಠಾನದ ನಂತರ: ಹುಲ್ಲುಗಾವಲು ಪ್ರದೇಶದಲ್ಲಿ ‘ಅನಗತ್ಯ ನಿರ್ಮಾಣ ಚಟುವಟಿಕೆ’ಗಳಿಗೆ ಕಡಿವಾಣ ಬೀಳುತ್ತದೆ. ಇಷ್ಟ ಬಂದ ಹಾಗೆ ಭೂಬಳಕೆ ಮಾಡುವುದಕ್ಕೆ ನಿರ್ಬಂಧ ವಿಧಿಸಬಹುದು. ಮಳೆ ನೀರು ಇಂಗುವುದರಿಂದ ಹುಲ್ಲು ಸಮೃದ್ಧವಾಗುತ್ತದೆ. ಸುತ್ತಮುತ್ತಲಿನ ಹಳ್ಳಿಗಳ ಜಾನುವಾರುಗಳಿಗೆ ಸಮೃದ್ಧ ಮೇವು ಸಿಗುತ್ತದೆ. ಅಂತರ್ಜಲದ ರೂಪದಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಲಭ್ಯವಾಗುತ್ತದೆ. ಕೃಷಿಯಲ್ಲಿ ಪರಾಗಸ್ಪರ್ಶದಂತಹ ಚಟುವಟಿಕೆಗಳಿಗೆ ಪೂರಕವಾಗುವ ಸ್ಥಳೀಯ ಕೀಟ ಪ್ರಭೇದಗಳ ಸಂಖ್ಯೆ ವೃದ್ಧಿಯಾಗುತ್ತದೆ. ಕೀಟಗಳನ್ನು ತಿನ್ನಲು ಬರುವ ಪಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ಪಕ್ಷಿಗಳು ಬೆಳೆಗಳನ್ನು ಕಾಡುವ ಕೀಟಗಳನ್ನೂ ಹಿಡಿದು ತಿನ್ನುತ್ತವೆ. ಪರೋಕ್ಷವಾಗಿ ಕೀಟ ನಿಯಂತ್ರಕವಾಗಿ ಕೆಲಸ ಮಾಡುತ್ತವೆ ಎಂಬುದು ಪರಿಸರ ಕಾರ್ಯಕರ್ತ ಕೆ.ಎಸ್.ಶೇಷಾದ್ರಿ ಅಭಿಮತ.

ಒಟ್ಟಾರೆ ಹುಲ್ಲುಗಾವಲಿನ ಸಂರಕ್ಷಣೆಯಿಂದ ಹೆಸರಘಟ್ಟ ಸುತ್ತಮುತ್ತಲಿನ ಜನ–ಜಾನುವಾರುಗಳಿಗೆ ಮಾತ್ರವಲ್ಲ, ಹುಲ್ಲುಗಾವಲಿನ ‘ಎಲ್ಲ ಪಾಲುದಾರರಿಗೆ’ ಮತ್ತು ಉತ್ತರ ಭಾಗದ ಬೆಂಗಳೂರಿಗರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಲವು ಅನುಕೂಲಗಳಾಗುತ್ತವೆ ಎಂಬುದು ಪರಿಸರ ಕಾರ್ಯಕರ್ತರ ಅಭಿಪ್ರಾಯವಾಗಿದೆ.

ಹೆಸರಘಟ್ಟ ಹುಲ್ಲುಗಾವಲಿನ ಒಂದು ನೋಟ (ಸಂಗ್ರಹ ಚಿತ್ರ) 

ಹೆಸರಘಟ್ಟ ಪ್ರದೇಶದ ಮಹತ್ವ

* ಹುಲ್ಲುಗಾವಲಿರುವ ಪರಿಸರ ಸೂಕ್ಷ್ಮ ವಲಯ

* ಅಂತರ್ಜಲ ವೃದ್ಧಿಗೆ ಪೂರಕವಾದ ಪ್ರದೇಶ

* ದಕ್ಷಿಣ ಭಾರತದ ಪ್ರಮುಖ ಕನ್ನೌಲ್‌ ಹಕ್ಕಿ (ಲೆಸ್ಸೆರ್‌ ಫ್ಲೊರಿಕನ್) ಜವುಗು ಸೆಳೆವ (ಮಾರ್ಷ್‌ ಹ್ಯಾರಿಯರ್) ಮೊಂಟಾಗು ಹ್ಯಾರಿಯರ್ ನೆಲಗುಬ್ಬಿ (ಲಾರ್ಕ್‌‌) ಸೇರಿದಂತೆ 234ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಇಲ್ಲಿವೆ

* ರಷ್ಯಾ ಮಧ್ಯ ಏಷ್ಯಾದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ * ಕಾಡುಪಾಪ ಗುಳ್ಳೇನರಿ ಮುಂಗುಸಿಯಂತಹ ಹಲವು ವನ್ಯಜೀವಿಗಳ ಆವಾಸಸ್ಥಾನ

* ಅಪರೂಪದ ಲೈಲ್ಯಾಕ್‌ ಸಿಲ್ವರ್‌ ಲೈನ್‌ ಚಿಟ್ಟೆಗಳು ಈ ಪ್ರದೇಶದಲ್ಲಿವೆ

- ‘ಗಣಿಗಾರಿಕೆ ನಿರ್ಮಾಣಕ್ಕೆ ನಿರ್ಬಂಧ’

‘ಹೆಸರಘಟ್ಟ ಹುಲ್ಲುಗಾವಲನ್ನು ಸಂರಕ್ಷಿತ ಮೀಸಲು ಪ್ರದೇಶ ಎಂದು ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ಈ ಪ್ರದೇಶವು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರುತ್ತದೆ. ಆ ಬಳಿಕ ಅಲ್ಲಿ ಯಾವುದೇ ರೀತಿಯ ಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ’ ಎನ್ನುತ್ತಾರೆ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಯು.ವಿ. ಸಿಂಗ್‌. ‘ಸಂರಕ್ಷಿತ ಪ್ರದೇಶದ ಗಡಿ ಗುರುತಿಸುವ ಜೊತೆಗೆ ಬಫರ್‌ ವಲಯವನ್ನೂ ಗುರುತಿಸಬೇಕಾಗುತ್ತದೆ. ಈಗಾಗಲೇ ಅಲ್ಲಿ ಮರಳು ಕಲ್ಲು ಕ್ವಾರಿಗಳಿಗೆ ಅನುಮತಿ ನೀಡಿದ್ದರೆ ರದ್ದುಗೊಳಿಸಬೇಕಾಗುತ್ತದೆ. ಕಟ್ಟಡ ನಕ್ಷೆಗಳಿಗೆ ಅನುಮೋದನೆ ನೀಡಿದ್ದು ನಿರ್ಮಾಣ ಕಾಮಗಾರಿ ಆರಂಭವಾಗದೇ ಇದ್ದಲ್ಲಿ ಅಂತಹ ಎಲ್ಲ ನಕ್ಷೆ ಅನುಮೋದನೆಗಳನ್ನೂ ರದ್ದುಮಾಡಬೇಕಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ರೀತಿಯ ಭೂ ಮಂಜೂರಾತಿಗೆ ಅವಕಾಶ ಇರುವುದಿಲ್ಲ’ ಎಂದು ತಿಳಿಸಿದರು. ಸಂರಕ್ಷಿತ ಪ್ರದೇಶದಲ್ಲಿ ಪಕ್ಷಿ ವೀಕ್ಷಣೆಗೆ ದೂರದರ್ಶಕದ ವ್ಯವಸ್ಥೆ ಮಾಡಬಹುದು. ಮಾಹಿತಿ ನೀಡಲು ಗೈಡ್‌ಗಳನ್ನೂ ನೇಮಿಸಬಹುದು. ಆದರೆ ಈ ಚಟುವಟಿಕೆಗಳು ಸಂರಕ್ಷಿತ ಪ್ರದೇಶದ ಕೇಂದ್ರ ವಲಯದಿಂದ ದೂರವಿರಬೇಕು ಎಂದು ಅವರು ಸಲಹೆ ನೀಡಿದರು.  

ಮುಂದಿನ ನಡೆ ಹೀಗಿರಲಿ..

ತಲೆತಲಾಂತರದಿಂದ ಈ ಭಾಗದಲ್ಲಿ ಪಶುಸಂಗೋಪನೆ ಮೀನುಗಾರಿಕೆ ಮಾಡುತ್ತಿರುವವರಿಗೆ ನಿರ್ಬಂಧ ವಿಧಿಸದಂತಹ ನಿಯಮಗಳನ್ನು ರೂಪಿಸಬೇಕು. ಕಾನೂನು ಪ್ರಕಾರ ಸ್ಥಳೀಯ ಪಂಚಾಯಿತಿ ಸದಸ್ಯರು ಸೇರಿ ಎಲ್ಲ ‘ಪಾಲುದಾರರ’ ಪ್ರತಿನಿಧಿಗಳಿರುವ ಸಮಿತಿ ರಚನೆಯಾಗಬೇಕು. ವ್ಹೀಲಿ ಡ್ರಿಫ್ಟಿಂಗ್ ಕುಡಿತ ಜೂಜು ಇತ್ಯಾದಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು.

– ಮಹೇಶ್ ಭಟ್ ಪರಿಸರ ಕಾರ್ಯಕರ್ತ

ಸ್ಥಳೀಯರ ಓಡಾಟಕ್ಕೆ ಮುಕ್ತ ಅವಕಾಶವಿರೇಕು. ಸ್ಥಳೀಯರನ್ನೊಳಗೊಂಡ ಸಂರಕ್ಷಣಾ ಕ್ರಮಗಳಿಗೆ ಆದ್ಯತೆ ನೀಡಬೇಕು.

– ವಿಜಯ್ ನಿಶಾಂತ್ ವೃಕ್ಷ ಫೌಂಡೇಷನ್

ಹೆಸರಘಟ್ಟ ಹುಲ್ಲುಗಾವಲು ಪ್ರದೇಶದಲ್ಲಿ ಅನಗತ್ಯ ವಾಹನಗಳ ಸಂಚಾರ ಹೆಚ್ಚುತ್ತಿದ್ದು ಅವುಗಳಿಗೆ ಕಡಿವಾಣ ಹಾಕಬೇಕು. ಜನರಿಗೆ ಹುಲ್ಲುಗಾವಲಿನ ಮಹತ್ವ ತಿಳಿಸಲು ತರಬೇತಿ ಕೇಂದ್ರ ಆರಂಭಿಸಬೇಕು. ಈ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಜನರೂ ಒಳಗೊಳ್ಳುವಂತಾಗಬೇಕು.

– ಶೇಷಾದ್ರಿ ರಾಮಸ್ವಾಮಿ ಪರಿಸರ ಕಾರ್ಯಕರ್ತ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.