ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಕೆರೆಗಳ ಸಂರಕ್ಷಣೆ, ನಗರ ಹಸಿರೀಕರಣದಲ್ಲಿ ಸಾರ್ವಜನಿಕರು ಪಾಲ್ಗೊಳ್ಳಲು ಪಾಲಿಕೆ ತಯಾರಿಸಿದ ‘ಹಸಿರು ರಕ್ಷಕ’, ‘ಉದ್ಯಾನ ಮಿತ್ರ’ ಹಾಗೂ ‘ಕೆರೆ ಮಿತ್ರ’ ಎಂಬ ಮೊಬೈಲ್ ಆ್ಯಪ್ ಮತ್ತು ಮೂರು ವೆಬ್ ಲಿಂಕ್ (ಜಾಲತಾಣ) ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ.
ಈ ಮೂರು ಮೊಬೈಲ್ ಆ್ಯಪ್ ಮತ್ತು ಜಾಲತಾಣಗಳನ್ನು ಕೆಲವು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿದ್ದರು.
ಶಾಲಾ-ಕಾಲೇಜು ಮಕ್ಕಳನ್ನು ಒಳಗೊಂಡು ಗಿಡಗಳನ್ನು ನೆಟ್ಟು ಪೋಷಿಸುವುದಕ್ಕಾಗಿ ‘ಹಸಿರು ರಕ್ಷಕ‘ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ಮರಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿಗೊಳಿಸಲು, ಅವರೇ ಗಿಡನೆಟ್ಟು ಪೋಷಿಸಲು hasirurakshaka.bbmpgov.in ವೆಬ್ ಲಿಂಕ್ ಆ್ಯಪ್ ಆರಂಭಿಸಲಾಗಿದೆ.
ಉದ್ಯಾನ ನಿರ್ವಹಣೆಯನ್ನು ವೀಕ್ಷಿಸಲು https://pms.bbmpgov.in/park ವೆಬ್ ಲಿಂಕ್ ಬಳಸಬಹುದು. ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಈ ಅಪ್ಲಿಕೇಷನ್ ಅನ್ನು ಉದ್ಯಾನ ಅಧಿಕಾರಿಗಳು, ನಿರ್ವಹಣೆಯ ಗುತ್ತಿಗೆದಾರರು, ನೋಡಲ್ ಅಧಿಕಾರಿಗಳು ಹಾಗೂ ಹಸಿರು ಮಿತ್ರರು ಬಳಕೆ ಮಾಡಬಹುದು.
ಕೆರೆ ನಿರ್ವಹಣೆ ಕಾಮಗಾರಿಯ ತಪಾಸಣೆ ನಡೆಸಲು ‘ಕೆರೆಮಿತ್ರ’ ಮೊಬೈಲ್ ಅಪ್ಲೀಕೇಷನ್ ಬಳಸಬಹುದು. ims.bbmpgov.in/lake ಲಿಂಕ್ ಮೂಲಕ ಕೆರೆಯ ಅಧಿಕಾರಿಗಳು, ಗುತ್ತಿಗೆದಾರರು, ನೋಡಲ್ ಅಧಿಕಾರಿಗಳು ಹಾಗೂ ಕೆರೆ ಮಿತ್ರರು ಬಳಸಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
’ಹಸಿರು ಮಿತ್ರ’ಕ್ಕಾಗಿ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಿ.ಎಲ್.ಸ್ವಾಮಿ (94806 83047), ‘ಕೆರೆಮಿತ್ರ’ಕ್ಕಾಗಿ ಬಿಬಿಎಂಪಿ ಕೆರೆಗಳ ವಿಭಾಗ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್ (94806 83059), ‘ಉದ್ಯಾನ ಮಿತ್ರ’ ಕ್ಕಾಗಿ ಬಿಬಿಎಂಪಿ ತೋಟಗಾರಿಕೆ ಉಪ ನಿರ್ದೇಶಕ ಚಂದ್ರಶೇಖರ್ (95350 15189) ಅವರನ್ನು ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.