ಬೆಂಗಳೂರು: ‘ಸಾಧನೆ ಮಾಡಲು ಮೊದಲು ಕನಸು ಕಾಣಬೇಕು. ಆದರೆ ನನ್ನ ಬದುಕು ಕನಸುಗಳೇ ಇಲ್ಲದ ದಾರಿಯಾಗಿತ್ತು’ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ತಿಳಿಸಿದರು.
ಕರ್ನಾಟಕ ರಾಜ್ಯ ದೇವಾಂಗ ನೌಕರರ ಸಂಘ ಶನಿವಾರ ಹಮ್ಮಿಕೊಂಡಿದ್ದ ‘ನಾಳಿನ ನಕ್ಷತ್ರಗಳು’ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಂದೇನು? ಯಾವ ದಾರಿಯಲ್ಲಿ ಹೋಗಬೇಕು ಎಂದೂ ಗೊತ್ತಿಲ್ಲದೇ ಬೆಳೆದೆ. ನಟನಾ ಕ್ಷೇತ್ರಕ್ಕೂ ಆಕಸ್ಮಿಕವಾಗಿ ಬಂದೆ. ಎಲ್ಲರ ಜೀವನದಲ್ಲಿ ಇರುವಂತೆ ನನ್ನ ಬದುಕಲ್ಲೂ ಅಪಮಾನ, ನೋವು, ನಿಂದನೆ, ಸಂಕಷ್ಟಗಳಿದ್ದವು. ಎಲ್ಲವನ್ನು ಸ್ವೀಕರಿಸಿ ಮುಂದೆ ನಡೆದೆ’ ಎಂದರು.
‘ನಾನು ನಟಿಯಾಗಿದ್ದನ್ನು, ರಾಜಕೀಯಕ್ಕೆ ಪ್ರವೇಶಿಸಿದ್ದನ್ನು ಒಳ್ಳೆಯ ತೀರ್ಮಾನ ಎಂದು ಕರೆಯುವವರಿದ್ದಾರೆ. ಅದೆಲ್ಲ ಬಯಸಿ ಆಗಿದ್ದಲ್ಲ. ಪರಿಸ್ಥಿತಿಗಳಲ್ಲಿ ಎದುರಾದ ಕಾರಣಗಳು ಅಷ್ಟೆ. ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾ ಮುಂದೆ ಸಾಗಿದರೆ ನಮಗೂ ಒಳ್ಳೆಯದಾಗುತ್ತದೆ’ ಎಂದರು.
‘ವಿದ್ಯೆ ಬಹಳ ಮುಖ್ಯ. ಜೊತೆಗೆ ಸಂಸ್ಕಾರವೂ ಮುಖ್ಯ. ಕೆಲವೊಂದು ಸಂಸ್ಕಾರಗಳು ಕುಟುಂಬದಿಂದ ಬಂದರೆ, ಬಹಳಷ್ಟು ಸಮಾಜದಿಂದ ಬರುತ್ತವೆ. ವಿದ್ಯೆ ಮತ್ತು ಸಂಸ್ಕಾರದ ಜೊತೆಗೆ ನಮ್ಮ ಕೆಲಸ ನಾವು ಮಾಡುತ್ತಿರಬೇಕು’ ಎಂದು ಸಲಹೆ ನೀಡಿದರು.
ತುಮಕೂರು ರಾಮಕೃಷ್ಣ–ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿಯವರು ಮಾತನಾಡಿ, ‘ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದೇ ಹೋದರೆ ದೇವರ ಮೇಲೆ ಎಷ್ಟೇ ನಂಬಿಕೆ ಇದ್ದರೂ ಪ್ರಯೋಜನವಿಲ್ಲ. ಬಡತನ ಶಾಪವಲ್ಲ. ಸೋಮಾರಿತನ, ಅಸಡ್ಡೆ, ವಿಪರೀತ ಪರಾವಲಂಬಿಗಳಾಗುವುದು ಶಾಪ’ ಎಂದು ತಿಳಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸಿದ ದೇವಾಂಗ ಸಮಾಜದ ಎಸ್‌ಎಸ್‌ಎಲ್‌ಸಿ, ಸಿಬಿಎಸ್‌ಇ, ದ್ವಿತೀಯ ಪಿಯು ಹಂತದ ವಿದ್ಯಾರ್ಥಿಗಳನ್ನು, ಪದವೀಧರರು, ಐಟಿಐ, ಸ್ನಾತಕೋತ್ತರ ಪದವೀಧರರು, ಪಿಎಚ್.ಡಿ ಪಡೆದವರನ್ನು ಗೌರವಿಸಲಾಯಿತು.
ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ದೇವಾಂಗ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಭಾಸ್ಕರಯ್ಯ, ಪ್ರಧಾನ ಕಾರ್ಯದರ್ಶಿ ಟಿ. ಶ್ರೀನಿವಾಸಮೂರ್ತಿ, ದೇವಾಂಗ ಸಂಘದ ಅಧ್ಯಕ್ಷ ಜಿ. ರಮೇಶ್, ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲಬುರಗಿ, ಪ್ರಧಾನ ಕಾರ್ಯದರ್ಶಿ ಜಿ.ಆರ್. ಮಂಜೇಶ್ ಭಾಗವಹಿಸಿದ್ದರು. ಉಮಾಶ್ರೀ, ಐಎಫ್‌ಎಸ್ ಪ್ರೊಬೆಷನರ್ ಎಸ್. ನಾಗಭೂಷಣ, ಸಮಾಜಸೇವಕರಾದ ವಸುಂಧರಾ–ಬಿ.ಪಿ. ಸನಾತನಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.