ಬೆಂಗಳೂರು: ‘ವಿಧಿವಿಧಾನಗಳನ್ನು ನಂಬದ ಗಿರೀಶ ಕಾರ್ನಾಡ ಅವರು ಧರ್ಮ ವಿರೋಧಿ ಆಗಿರಲಿಲ್ಲ. ಆದರೆ, ಧರ್ಮಾತೀತವಾಗಿ ಬದುಕಿದವರು’ ಎಂದುಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ಗಿರೀಶ ಕಾರ್ನಾಡ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ಕಾರ್ನಾಡರು ಅಪಾರ ಕೊಡುಗೆ ನೀಡಿದ್ದಾರೆ. ಆ ಮೂಲಕವೇಅವರು ದೇಶದ ಚಲನಶೀಲ ಪರಂಪರೆಯ ಭಾಗವಾಗಿ ಉಳಿದಿದ್ದಾರೆ’ ಎಂದರು.
‘ಕಾರ್ನಾಡರು ತಾವು ನಂಬಿದ್ದ ಮಾರ್ಗಗಳಿಗೆ, ಜಾತ್ಯತೀತ ಮೌಲ್ಯಕ್ಕೆ ಬದ್ಧರಾಗಿ ಜೀವಿಸಿದವರು. ಅವರ ಸಾಹಿತ್ಯ ಕೃಷಿಯಲ್ಲಿ ಅನುಸಂಧಾನದ ಮಾರ್ಗ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಮುಖಾಮುಖಿಯ ಮಾರ್ಗ ಕಾಣುತ್ತೇವೆ.ಧಾರವಾಡ, ಮುಂಬೈ, ಆಕ್ಸ್‌ಫರ್ಡ್ ಸುತ್ತಿದ ಕಾರ್ನಾಡರು ಬೆಂಗಳೂರಿನಲ್ಲಿ ವಿಕಾಸಗೊಂಡರು’ ಎಂದು ಹೇಳಿದರು.
ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಮಾತನಾಡಿ, ‘ಭಾರತೀಯ ನಾಗರಿಕತೆ ಹಾಗೂ ಸಂಸ್ಕೃತಿಯನ್ನು ಕಾರ್ನಾಡರಷ್ಟು ಆಳವಾಗಿ ತಿಳಿದುಕೊಂಡವರು ಬಹಳ ಕಡಿಮೆ. ಅವರ ನಾಟಕಗಳಲ್ಲಿ ಅದು ಸ್ಪಷ್ಟವಾಗುತ್ತದೆ’ ಎಂದು ಹೇಳಿದರು.
‘ಯು.ಆರ್. ಅನಂತಮೂರ್ತಿ ಹಾಗೂ ಕಾರ್ನಾಡರ ಕಥೆ, ಕಾದಂಬರಿಗಳನ್ನು ಓದಿದ ಯಾರೂ ಅವರ ಸಾವನ್ನು ಸಂಭ್ರಮಿಸಲು ಸಾಧ್ಯವಿಲ್ಲ. ತಿಳಿವಳಿಕೆ ಇಲ್ಲದೆ, ಕೇವಲ ಅವರು ಭಾಗವಹಿಸಿದ ಚಳವಳಿಗಳನ್ನು ಆಧರಿಸಿ ಅವರ ಸಾವನ್ನು ಸಂಭ್ರಮಿಸುವ ಜನರ ಮೇಲೆ ಸಿಟ್ಟಿಗೆ ಬದಲಾಗಿ ಕನಿಕರ ಮೂಡುತ್ತದೆ’ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ಕಾರ್ನಾಡರು ಯಾವುದಕ್ಕೂ ರಾಜಿ ಮಾಡಿಕೊಂಡವರಲ್ಲ.ಬಹುತ್ವದ ರಾಯಭಾರಿಯಾಗಿ ಕನ್ನಡ ಶ್ರೀಮಂತಗೊಳಿಸಿದವರು’ ಎಂದು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.