ADVERTISEMENT

ಸಾಕ್ಷಾತ್‌ ಸಮೀಕ್ಷೆ – ಕೆ.ಆರ್. ಪುರ : ’ಬೈರತಿ ಬಸವರಾಜ‘ ಕಟ್ಟಿಹಾಕಲು ಕಾಂಗ್ರೆಸ್ ತಂತ್ರ

ಕೆ.ಆರ್.ಪುರ ಕ್ಷೇತ್ರ

ಚಂದ್ರಹಾಸ ಹಿರೇಮಳಲಿ
Published 3 ಮೇ 2023, 21:02 IST
Last Updated 3 ಮೇ 2023, 21:02 IST
   

ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರನ್ನು ಶತಾಯಗತಾಯ ಸೋಲಿಸಲು ಪಣತೊಟ್ಟ ರೀತಿಯಲ್ಲಿ ಕೆ.ಆರ್.ಪುರ  ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಚಾರ ನಡೆಸಿದೆ. ಬಿಜೆಪಿ ಕಳೆದ ಬಾರಿಗಿಂತ ಗೆಲುವಿನ ಅಂತರ ಇನ್ನಷ್ಟು ಹಿಗ್ಗಿಸಲು ತಂತ್ರಗಾರಿಕೆ ಮಾಡುತ್ತಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಗೆದ್ದಿದ್ದ ಬೈರತಿ ಬಸವರಾಜ ಒಂದೇ ವರ್ಷದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. 2019ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ 63 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದರು. 2008ರಲ್ಲಿ ಬಿಜೆಪಿಯ ನಂದೀಶ್‌ ರೆಡ್ಡಿ ಕಾಂಗ್ರೆಸ್‌ನ ಎ.ಕೃಷ್ಣಪ್ಪ ಅವರನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ್ದರು. 2013ರಲ್ಲಿ ಬಿಜೆಪಿ ಒಡಕಿನ ಲಾಭ ಪಡೆದ ಕಾಂಗ್ರೆಸ್‌ನ ಬೈರತಿ ಬಸವರಾಜ ಅವರು ಕ್ಷೇತ್ರವನ್ನು ವಶಕ್ಕೆ ಪಡೆದಿದ್ದರು. 2018ರಲ್ಲೂ ಅದೇ ಫಲಿತಾಂಶ ಮರುಕಳಿಸಿತ್ತು. ಆದರೆ, ಕಾಂಗ್ರೆಸ್‌ನ ಗೆಲುವಿನ ಅಂತರ ಇನ್ನಷ್ಟು ಹಿಗ್ಗಿತ್ತು. ಕಾಂಗ್ರೆಸ್‌ನ ಭದ್ರಕೋಟೆಯನ್ನು ತನ್ನದೇ ಶಾಸಕ ಛಿದ್ರ ಮಾಡಿದ್ದ ಸೇಡು ತೀರಿಸಿಕೊಳ್ಳಲು ನಾಲ್ಕು ವರ್ಷಗಳಿಂದಲೇ ಯೋಜನೆ ರೂಪಿಸಿದ್ದ ಕಾಂಗ್ರೆಸ್‌ ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಅಣ್ಣನ ಮಗ ಡಿ.ಕೆ.ಮೋಹನ್‌ ಅವರನ್ನು ಬೈರತಿ ವಿರುದ್ಧ ಕಣಕ್ಕೆ ಇಳಿಸಿದೆ. ’ವಿಶ್ವಾಸ ದ್ರೋಹ‘ದ ವಿಷಯವನ್ನು ಮತದಾರರ ಮುಂದೆ ಇಟ್ಟು ಮತಯಾಚಿಸುತ್ತಿದೆ. 

’ವಿಶ್ವಾಸ ದ್ರೋಹ‘ ಎನ್ನುವುದು ಕಾಂಗ್ರೆಸ್‌ ಅಪಪ್ರಚಾರ. 2019ರ ಉಪ ಚುನಾವಣೆಯಲ್ಲೇ ಭಾರಿ ಬಹುಮತಗಳಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಮತದಾರರು ಉತ್ತರ ನೀಡಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡುತ್ತಿದೆ. 

ADVERTISEMENT

ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಕ್ಷದ ಡಾ.ಕೇಶವಕುಮಾರ್, ಸಿಪಿಐ(ಎಂ)ನ ಎಂ.ಮಂಜೇಗೌಡ, ಸಿಪಿಐ (ಎಂಎಲ್‌)ನ ಪಿ.ಪಿ.ಅಪ್ಪಣ್ಣ, ಕರ್ನಾಟಕ ರಾಷ್ಟ್ರಸಮಿತಿಯ ಆರೋಗ್ಯಸ್ವಾಮಿ ಸೇರಿದಂತೆ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್‌ ಸಿಪಿಐ(ಎಂ) ಅಭ್ಯರ್ಥಿಗೆ ಬೆಂಬಲ ಘೋಷಿಸಿರುವುದರಿಂದ ಆ ಪಕ್ಷದ ಆ ಅಭ್ಯರ್ಥಿ ಸಿ.ವೆಂಕಟಾಚಲಪತಿ ತಟಸ್ಥರಾಗಿ ಉಳಿದಿದ್ದಾರೆ. 11 ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೂ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ.

ಎರಡು ಬಾರಿ ಬೈರತಿ ಬಸವರಾಜಗೆ ಪ್ರತಿಸ್ಪರ್ಧಿಯಾಗಿದ್ದ ನಂದೀಶ್ ರೆಡ್ಡಿ ಅವರ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ನಂದೀಶ್ ರೆಡ್ಡಿ ಬೆಂಬಲಿಗರು ಮುಕ್ತವಾಗಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ ಎನ್ನುವ ಮಾತುಗಳೂ ಕೇಳಿಬಂದವು.  

ಕೆ.ಆರ್‌.ಪುರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಜೀವಂತವಾಗಿವೆ. ಆದರೆ, ಸಮಸ್ಯೆಗಳ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿರುವುದು ಕ್ಷೇತ್ರದಲ್ಲಿ ಕಂಡು ಬಂತು. 2013ರಿಂದ ಈಗಿನ ಬಿಜೆಪಿ ಅಭ್ಯರ್ಥಿಯೇ ಶಾಸಕರಾಗಿದ್ದರೂ, ಅವರು ಕಾಂಗ್ರೆಸ್‌ ಪ್ರತಿನಿಧಿಯಾಗಿದ್ದರು. ಹಾಗಾಗಿ, ಅವರನ್ನು ಟೀಕಿಸಿದರೆ ಪಕ್ಷ ಟೀಕಿಸಿದಂತೆ ಆಗುತ್ತದೆ ಎನ್ನುವ ಕಾರಣಕ್ಕೆ ಈ ಚುನಾವಣೆಯಲ್ಲಿ ಸಮಸ್ಯೆಗಳು ಪ್ರಧಾನ ವಿಷಯಗಳಾಗಿಲ್ಲ. ಸಂಚಾರ, ರಾಜಕಾಲುವೆ, ಚರಂಡಿ ಸಮಸ್ಯೆ, ಕಾವೇರಿ ನೀರಿನ ಸಂಪರ್ಕ ಸಮಸ್ಯೆಗಳು ಜೀವಂತವಾಗಿದ್ದರೂ ಎರಡೂ ಪಕ್ಷಗಳು ಚಕಾರ ಎತ್ತುತ್ತಿಲ್ಲ. ಶೇ 40 ಭ್ರಷ್ಟಾಚಾರ, ಸ್ಥಳೀಯ  ರೌಡಿಸಂ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯಗಳನ್ನು ಕಾಂಗ್ರೆಸ್‌ ಪ್ರಸ್ತಾಪಿಸುತ್ತಿದೆ. ಬಿಜೆಪಿ ಮೋದಿ, ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಯನ್ನು ಜನರ ಮುಂದಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.