ಬೆಂಗಳೂರು: ಮನೆ ಬದಲಾಯಿಸಿರುವವರು ಗೃಹ ಜ್ಯೋತಿ ಸೌಲಭ್ಯ ಪಡೆಯಲು ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ–ಲಿಂಕ್ ಮಾಡಿ, ಹೊಸ ಮನೆಯ ಸಂಖ್ಯೆಯನ್ನು ಲಿಂಕ್ ಮಾಡುವ ಸೌಲಭ್ಯವನ್ನು ಇಂಧನ ಇಲಾಖೆ ಕಲ್ಪಿಸಿದೆ.
ಬಾಡಿಗೆ ಮನೆಯಲ್ಲಿ ವಾಸಿಸುವವರು ಅಥವಾ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದು, ವಿವಿಧ ಕಾರಣಗಳಿಗಾಗಿ ಮನೆ ಬದಲಿಸಿದಾಗ ಗೃಹ ಜ್ಯೋತಿ ಸೌಲಭ್ಯ ಪಡೆಯಲು ಆರ್.ಆರ್. ಸಂಖ್ಯೆ ಬದಲಿಸಲು ಅವಕಾಶವಿರಲಿಲ್ಲ. ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಆರ್.ಆರ್. ಸಂಖ್ಯೆಯನ್ನು ಡಿ–ಲಿಂಕ್ ಮಾಡಿ, ಹೊಸ ಸಂಖ್ಯೆಯನ್ನು ಲಿಂಕ್ ಮಾಡಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅವಕಾಶ ಒದಗಿಸಲಾಗಿದೆ.
ಡಿ-ಲಿಂಕ್ ಮಾಡುವುದು ಹೇಗೆ?:
ಸೇವಾ ಸಿಂಧು ಪೋರ್ಟಲ್‌ನ https://sevasindhu.karnataka.gov.in/GruhaJyothi_Delink/GetAadhaarData.aspx ವೆಬ್‌ಸೈಟ್ ಪ್ರವೇಶಿಸಿ ಆರ್.ಆರ್. ಸಂಖ್ಯೆಯನ್ನು ಡಿ–ಲಿಂಕ್ ಮಾಡಬಹುದು. ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆ ಪಡೆಯಬಹುದು ಎಂದು ಇಂಧನ ಇಲಾಖೆ ಪ್ರಕಟಣೆ ತಿಳಿಸಿದೆ,
ಮನೆ ಬದಲಾಯಿಸಿದಾಗ ಹಿಂದೆ ಆ ಮನೆಯಲ್ಲಿ ವಾಸವಿದ್ದವರ ಆಧಾರ್ ಸಂಖ್ಯೆ ಜತೆ ಆರ್.ಆರ್. ನಂಬರ್ ಲಿಂಕ್ ಆಗಿದೆಯೇ ಅಥವಾ ಅವರು ಡಿ–ಲಿಂಕ್ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಆಗಿರದಿದ್ದರೆ ಡಿ-ಲಿಂಕ್ ಮಾಡಿ, ಹೊಸದಾಗಿ ಆರ್.ಆರ್ ನಂಬರ್‌ಗೆ ಆಧಾರ್ ಲಿಂಕ್ ಮಾಡಬೇಕು.
‘ಡಿ–ಲಿಂಕ್ ಸೌಲಭ್ಯ ಕಲ್ಪಿಸುವಂತೆ ಅನೇಕ ಗ್ರಾಹಕರು ಮನವಿ ಮಾಡಿದ್ದರು. ಯೋಜನೆ ಆರಂಭವಾಗಿ ವರ್ಷ ತುಂಬಿರುವ ಈ ಸಂದರ್ಭದಲ್ಲಿ ಗೃಹಜ್ಯೋತಿ ಯೋಜನೆಯ ವೆಬ್‌ಸೈಟ್‌ನಲ್ಲಿದ್ದ ತಾಂತ್ರಿಕ ತೊಂದರೆ ಸರಿಪಡಿಸಿ, ಡಿ–ಲಿಂಕ್ ಸೌಲಭ್ಯವನ್ನು ಕಲ್ಪಿಸಲಾಗಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.