ADVERTISEMENT

ಜಿಎಸ್‌ಟಿ ವಂಚನೆ ಆರೋಪ; ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 20:34 IST
Last Updated 3 ಡಿಸೆಂಬರ್ 2021, 20:34 IST
ಜಿಎಸ್‌ಟಿ
ಜಿಎಸ್‌ಟಿ    

ಬೆಂಗಳೂರು: ನಗರದಲ್ಲಿ ಹಲವು ಪ್ರಮುಖ ಕಾಮಗಾರಿಗಳ ಗುತ್ತಿಗೆ ನಿರ್ವಹಿಸಿರುವ ವೆಂಕಟರಾವ್ ಇನ್‌ಫ್ರಾ ಪ್ರಾಜೆಕ್ಟ್ಸ್ ‍ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ, ಜಿಎಸ್‌ಟಿ ವಂಚನೆ ಮಾಡಿರುವ ಆರೋಪದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ನೋಟಿಸ್ ನೀಡಿದೆ.

ಪದ್ಮನಾಭನಗರದಲ್ಲಿನ ಗುತ್ತಿಗೆದಾರರ ಕಚೇರಿಗೆ ಅ.12ರಂದು ಭೇಟಿ ನೀಡಿದ್ದ ಇಲಾಖೆಯ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲನೆ ನಡೆಸಿತ್ತು.

ಜುಲೈ 2017ರಿಂದ ಆಗಸ್ಟ್ 2021ರ ಅವಧಿಯಲ್ಲಿ ತೆರಿಗೆ ಪಾವತಿಸ ಬೇಕಿದ್ದರೂ, ವಿನಾಯಿತಿ ನೀಡಲಾಗಿದೆ ಎಂದು ಗುತ್ತಿಗೆದಾರರು ತಪ್ಪಾಗಿ ಘೋಷಿಸಿಕೊಂಡಿದ್ದಾರೆ.

ADVERTISEMENT

ಸಂಬಂಧಪಟ್ಟವರಿಂದ (ಬಿಬಿಎಂ‍ಪಿ) ಗುತ್ತಿಗೆದಾರರು ತೆರಿಗೆ ಮೊತ್ತವನ್ನು ಬಿಲ್‌ ಜತೆಗೆ ಪಡೆದು ಕೊಂಡಿದ್ದು, ಅದನ್ನು ಇಲಾಖೆಗೆ ಪಾವತಿಸಿಲ್ಲ. ಮುಂದಿನ ಆರು ತಿಂಗಳಲ್ಲಿ ಬಾಕಿ ತೆರಿಗೆಯನ್ನು ಪಾವತಿಸಬೇಕು. ಇಲ್ಲದಿದ್ದರೆ ಶೇ 18ರಷ್ಟು ಬಡ್ಡಿಯೂ ತೆರಿಗೆ ಮೊತ್ತಕ್ಕೆ ಸೇರಿಕೊಳ್ಳಲಿದೆ ಎಂದು ತೆರಿಗೆ ಇಲಾಖೆ ದಕ್ಷಿಣ ವಲಯದ ಸಹಾಯಕ ಆಯುಕ್ತರು (ಜಾರಿ) ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಹೆಚ್ಚುವರಿ ಕಾಮಗಾರಿಗಳ ನೆಪದಲ್ಲಿ ಮೂಲ ಗುತ್ತಿಗೆ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತದ ಕಾಮಗಾರಿಯನ್ನು ಇದೇ ಗುತ್ತಿಗೆದಾರರಿಗೆ ವಹಿಸುವ ಮೂಲಕ ಬಿಬಿಎಂಪಿಯು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಆಶಯವನ್ನೇ ಗಾಳಿಗೆ ತೂರಿದೆ ಎಂಬ ಆರೋಪವೂ ಇದೆ. ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿನ ಮೇಲ್ಸೇತುವೆ ಕಾಮಗಾರಿಗಳ ಪ್ಯಾಕೇಜ್‌ ಗುತ್ತಿಗೆಯನ್ನು ಟೆಂಡರ್ ಕರೆಯದೇ ಇದೇ ಕಂಪನಿಗೆ ನೀಡಲಾಗಿತ್ತು. ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕಾಮಗಾರಿಯನ್ನೂ ಇದೇ ಕಂಪನಿ ನಿರ್ವಹಿಸುತ್ತಿದೆ.

* ವಾಣಿಜ್ಯ ತೆರಿಗೆ ಇಲಾಖೆಯವರು ಕೆಲವು ಸ್ಪಷ್ಟನೆಗಳನ್ನು ಕೇಳಿದ್ದರು. ಅದಕ್ಕೆ ಉತ್ತರವನ್ನು ಕೊಟ್ಟಿದ್ದೇವೆ. ನಾವು ಜಿಎಸ್‌ಟಿ ವಂಚನೆ ಮಾಡಿಲ್ಲ.

-ರಘುನಾಥ ನಾಯ್ಡು, ಗುತ್ತಿಗೆದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.