ಬೆಂಗಳೂರು: ಬೆಟ್ಟಿಂಗ್, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್, ಲಾಟರಿ, ಆನ್‌ಲೈನ್ ಮನಿ ಗೇಮಿಂಗ್‌ಗಳನ್ನು ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಲು ಕರ್ನಾಟಕ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಸುಗ್ರೀವಾಜ್ಞೆಯನ್ನು ಶುಕ್ರವಾರ ಹೊರಡಿಸಲಾಗಿದೆ.
ಎಲ್ಲ ಬಗೆಯ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳಿಗೆ ಶೇಕಡ 28ರಷ್ಟು ಜಿಎಸ್‌ಟಿ ವಿಧಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ (ಜಿಎಸ್‌ಟಿ ಕೌನ್ಸಿಲ್) ಆಗಸ್ಟ್ 2ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು. ಭಾನುವಾರದಿಂದ (ಅಕ್ಟೋಬರ್ 1) ಈ ಕ್ರಮ ಜಾರಿಗೆ ಬರಲಿದೆ. ಅದಕ್ಕೆ ಪೂರಕವಾಗಿ ಎಲ್ಲ ರಾಜ್ಯಗಳಲ್ಲೂ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರುವಂತೆ ಜಿಎಸ್‌ಟಿ ಮಂಡಳಿ ಸೂಚಿಸಿತ್ತು.
ತಕ್ಷಣದಿಂದಲೇ ತಿದ್ದುಪಡಿಯನ್ನು ಜಾರಿಗೊಳಿಸಬೇಕಾದ ಕಾರಣ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಆರು ತಿಂಗಳೊಳಗೆ ಈ ತಿದ್ದುಪಡಿಗಳನ್ನು ಒಳಗೊಂಡ ಮಸೂದೆಯನ್ನು ವಿಧಾನಮಂಡಲದಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಬೇಕಿದೆ.
‘ಆನ್‌ಲೈನ್ ಮತ್ತು ವಿದ್ಯುನ್ಮಾನ ಸಂಪರ್ಕ ಜಾಲದಲ್ಲಿ ಆಟವಾಡಲು ಆಹ್ವಾನಿಸುವುದೂ ಸೇರಿದಂತೆ ಎಲ್ಲ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳು ಇನ್ನು ಮುಂದೆ ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ. ಆಟವು ಕೌಶಲ ಅಥವಾ ಕಾರ್ಯಕ್ಷಮತೆಯನ್ನು ಆಧರಿಸಿರಲಿ ಅಥವಾ ಆಧರಿಸದೇ ಇರಲಿ ಎಲ್ಲವೂ ತೆರಿಗೆ ವ್ಯಾಪ್ತಿಗೆ ಬರುತ್ತವೆ. ವರ್ಚ್ಯುಯಲ್ ಡಿಜಿಟಲ್ ಕರೆನ್ಸಿಯೂ ಸೇರಿದಂತೆ ಹಣ ಅಥವಾ ಹಣದ ಮೌಲ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿ ಹಣ ಅಥವಾ ಹಣದ ಮೌಲ್ಯವನ್ನು ಪಾವತಿಸಿ ಅಥವಾ ಠೇವಣಿಯಾಗಿಟ್ಟು ಆಡುವ ಆನ್‌ಲೈನ್‌ನ ಆಟಗಳು ತೆರಿಗೆ ವ್ಯಾಪ್ತಿಗೆ ಬರಲಿವೆ’ ಎಂಬ ಉಲ್ಲೇಖ ಸುಗ್ರೀವಾಜ್ಞೆಯಲ್ಲಿದೆ.
ಭಾರತದ ಹೊರಗಿನಿಂದ ದೇಶದೊಳಗೆ ನಡೆಸುವ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳಿಗೂ ಈ ತಿದ್ದುಪಡಿ ಅನ್ವಯವಾಗಲಿದೆ. ಈ ಸುಗ್ರೀವಾಜ್ಞೆಯು ಬೆಟ್ಟಿಂಗ್, ಕ್ಯಾಸಿನೊ, ಜೂಜು, ಕುದುರೆ ರೇಸಿಂಗ್, ಲಾಟರಿ ಅಥವಾ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ನಿಷೇಧಿಸುವ, ನಿರ್ಬಂಧಿಸುವ ಅಥವಾ ನಿಯಂತ್ರಿಸುವುದಕ್ಕಾಗಿ ಜಾರಿಯಲ್ಲಿರುವ ಯಾವುದೂ ಕಾನೂನುಗಳಿಗೆ ಅಡ್ಡಿಪಡಿಸುವುದಿಲ್ಲ. ತೆರಿಗೆ ವಿಧಿಸುವ ಸುಗ್ರೀವಾಜ್ಞೆಯು ಕ್ಯಾಸಿನೊ, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ಕಾನೂನುಬದ್ಧಗೊಳಿಸುವುದಿಲ್ಲ ಎಂಬ ಅಂಶ ಸುಗ್ರೀವಾಜ್ಞೆಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.