ADVERTISEMENT

ಮಾಲ್ ಪ್ರವೇಶಕ್ಕೆ ಮಾರ್ಗಸೂಚಿ ಶೀಘ್ರ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 16:08 IST
Last Updated 22 ಜುಲೈ 2024, 16:08 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ರಾಜ್ಯದ ಮಾಲ್‌ಗಳಿಗೆ ಭೇಟಿ ನೀಡುವಾಗ ನಿರ್ದಿಷ್ಟ ವಸ್ತ್ರ ಧರಿಸುವಂತೆ ನಿರ್ಬಂಧ ಹೇರಿಕೆಗೆ ತಡೆ ಒಡ್ಡಿ ಮಾರ್ಗಸೂಚಿ ಹೊರಡಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ಈ ವಿಷಯ ಪ್ರಕಟಿಸಿದ ಅವರು, ‘ಪಂಚೆ ನಮ್ಮ ಸಂಸ್ಕೃತಿ. ಅದಕ್ಕೆ ಪೂರಕವಾಗಿ ನಿಯಮ ರೂಪಿಸಲಾಗುವುದು’ ಎಂದರು. 

‘ಮಾಲ್‌ಗೆ ಪಂಚೆ ಧರಿಸಿ ಬಂದ ರೈತನನ್ನು ತಡೆದ ವಿಚಾರವಾಗಿ ವಿಧಾನಸಭೆಯಲ್ಲಿ ಶುಕ್ರವಾರ (ಜುಲೈ 19) ಚರ್ಚೆ ನಡೆದಿತ್ತು. ಇಡೀ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರದಿಂದಲೇ ನಿಯಮ ರೂಪಿಸಲಾಗುವುದು’ ಎಂದರು.

ADVERTISEMENT

‘ಜಿ.ಟಿ. ಮಾಲ್‌ಗೆ ಪಂಚೆ ಉಟ್ಟುಕೊಂಡು ಬಂದ ರೈತನಿಗೆ ಪ್ರವೇಶ ನೀಡದ ಕಾರಣ ಮಾಲ್ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಅಲ್ಲದೆ, ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಬೀಗ ಹಾಕಲಾಗಿತ್ತು. ಮಾಲ್‌ನವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ತೆರಿಗೆ ಬಾಕಿ ಪಾವತಿಗೆ ಚೆಕ್ ಪಡೆದು ಮಾಲ್ ತೆರೆಯಲು ಅನುಮತಿ ನೀಡಲಾಗಿದೆ’ ಎಂದರು.

‘ಪಂಚೆ ಹಾಕಿದ್ದರೆ, ಶೂ ಹಾಕದೆ ಇದ್ದರೆ ಕೆಲವು ಕ್ಲಬ್‌ಗಳಲ್ಲಿ‌ ಒಳಗೆ ಬಿಡುವುದಿಲ್ಲ. ಆ ಬಗ್ಗೆಯೂ ಗಮನಹರಿಸಬೇಕು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮನವಿ ಮಾಡಿದರು.

ಅದಕ್ಕೆ, ಕಾನೂನು ಸಚಿವ ಎಚ್.ಕೆ. ಪಾಟೀಲ, ‘ಕ್ಲಬ್ ವಿಚಾರವನ್ನು ಮಾಲ್‍ಗಳ ಜೊತೆ ಸೇರಿಸುವುದು ಬೇಡ’ ಎಂದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಮಾಲ್‍ಗಳಿಗೆ ಪರವಾನಗಿ ಕೊಡುವಾಗಲೇ ಗ್ರಾಮೀಣ ಭಾಗದ ಉಡುಪು ಧರಿಸಿದವರಿಗೆ ಅವಕಾಶ ನಿರಾಕರಿಸಬಾರದೆಂಬ ಷರತ್ತು ವಿಧಿಸಬೇಕು. ಸರ್ಕಾರ ಜಮೀನು ನೀಡಿರುವ ಕ್ಲಬ್‍ಗಳಿಗೂ ಮಾರ್ಗಸೂಚಿ ಅನ್ವಯವಾಗಬೇಕು. ಈ ಸಂಬಂಧ ಎನ್.ಎ. ಹ್ಯಾರಿಸ್‌ ನೇತೃತ್ವದ ಸದನ ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು. ಅಶೋಕ ಮಾತಿಗೆ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಕೂಡಾ ದನಿಗೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.