ADVERTISEMENT

ಡಿಕೆ–ಎಚ್‌ಡಿಕೆ: ಆಸ್ತಿ ಜಗಳ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 20:02 IST
Last Updated 15 ಏಪ್ರಿಲ್ 2024, 20:02 IST
<div class="paragraphs"><p>ಎಚ್‌ಡಿಕೆ</p></div>

ಎಚ್‌ಡಿಕೆ

   

ತಾಯಂದಿರಿಗೆ ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ ಎಂಬ ವಿಷಯ ಭಾರಿ ವಿವಾದಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಧ್ಯದ ಆಸ್ತಿ ಜಗಳ ತಾರಕಕ್ಕೇರಿದೆ.

‘ಕಲ್ಲುಬಂಡೆ ಕದ್ದು ಸಾಗಿಸಿರುವುದೇ ಕೆಲಸ’

ADVERTISEMENT

ಬೆಂಗಳೂರು: ‘ಡಿ.ಕೆ. ಶಿವಕುಮಾರ್‌ ಯಾವ ಕಷ್ಟಪಟ್ಟು ಆಸ್ತಿ ಸಂಪಾದಿಸಿದ್ದಾರೆ? ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸಿರುವುದೇ ಅವರ ಕೆಲಸ. ಆ ವ್ಯಕ್ತಿಯ ಬಗ್ಗೆ ಹೇಳಲು ಕಂತೆ ಕಂತೆ ಇವೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

‘ಎಚ್‌.ಡಿ. ದೇವೇಗೌಡರ ಕುಟುಂಬದ ಬಳಿ 1,000 ಎಕರೆ ಆಸ್ತಿ ಇದೆ’ ಎಂಬ ಶಿವಕುಮಾರ್‌ ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ‘ಬಿಡದಿ ಬಳಿ ನಾನು 45ರಿಂದ 48 ಎಕರೆ ಜಮೀನು ಹೊಂದಿದ್ದೇನೆ. ಸಿನಿಮಾ ವಿತರಕನಾಗಿದ್ದಾಗ ಗಳಿಸಿದ ಹಣದಿಂದ ಅದನ್ನು ಖರೀದಿ ಮಾಡಿದ್ದು’ ಎಂದರು.

‘ನಾನು ತೋಟದಲ್ಲಿ ರೆಸಾರ್ಟ್ ಮಾಡಿಲ್ಲ. ಬಂದು ನೋಡಪ್ಪ. ಕಲ್ಲಂಗಡಿ, ಬಾಳೆ, ಕೊಬ್ಬರಿ ಬೆಳೆದಿದ್ದೇನೆ. ಎಲ್ಲಾ ವಿಡಿಯೊ ಮಾಡಿಸಿ ಇಟ್ಟಿದ್ದೇನೆ. 20 ಟನ್‌ ಕೊಬ್ಬರಿ ದಾಸ್ತಾನು ಇದೆ. 50 ಟನ್‌ ಕಲ್ಲಂಗಡಿ ಬೆಳೆದಿದ್ದೆ’ ಎಂದು ಹೇಳಿದರು.

‘ಈಗ ತಾಯಂದಿರ ಕಣ್ಣೀರು ಡಿ.ಕೆ. ಶಿವಕುಮಾರ್‌ ಅವರಿಗೆ ಕಾಣುತ್ತಿದೆಯಾ? ಕೆಲವು ಹೆಣ್ಣು ಮಕ್ಕಳನ್ನು ಅಪಹರಿಸಿ ಅವರ ತಂದೆ, ತಾಯಂದಿರಿಂದ ಜಮೀನು ಬರೆಸಿಕೊಳ್ಳುವಾಗ ದುಃಖ ಆಗಲಿಲ್ಲವೆ’ ಎಂದು ಪ್ರಶ್ನಿಸಿದರು.

‘ಆಸ್ತಿಯ ದುರಾಸೆಗೆ 30 ವರ್ಷಗಳಲ್ಲಿ ಎಷ್ಟು ಕುಟುಂಬಗಳಿಗೆ ತೊಂದರೆ ಕೊಟ್ಟಿದ್ದೀರಿ ಎಂಬುದು ಗೊತ್ತಿದೆ. ಇವೆಲ್ಲವನ್ನೂ ನಾನು ಕಂಡಿದ್ದೇನೆ. ಧಮ್ಕಿ ಹಾಕಿಕೊಂಡು ರಾಜಕೀಯ ಮಾಡುವವರು ನನಗೆ ಬುದ್ಧಿ ಹೇಳುವ ಮಟ್ಟಕ್ಕೆ ಇದ್ದೀರಾ’ ಎಂದು ಕೇಳಿದರು.

‘₹2,000 ಕೊಟ್ಟು ದುಡಿಯುವ ಜನರಿಂದ ₹5,000 ಪಿಕ್‌ಪಾಕೆಟ್ ಮಾಡುತ್ತಾರೆ ಎಂಬುದನ್ನು ಹೇಳಿದ್ದೆ. ಮಹಿಳೆಯರನ್ನು ಗೌರವಿಸಿ ಸಾರಾಯಿ ನಿಷೇಧ ಮಾಡಿದ್ದೆ. ಕೋಟಿಗಟ್ಟಲೆ ಆಮಿಷ ಒಡ್ಡಿದ್ದರು. ಕಾಲಲ್ಲಿ ಒದ್ದು ಸಾರಾಯಿ ನಿಷೇಧ ಮಾಡಿದ್ದೆ’ ಎಂದು ಹೇಳಿದರು.

‘ನಾನು ದಾರಿ ತಪ್ಪಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ಹೌದು ದಾರಿ ತಪ್ಪಿರುವುದನ್ನು ವಿಧಾನಸಭೆಯಲ್ಲಿ ನಾನೇ ಹೇಳಿದ್ದೇನೆ. ನಂತರ ತಪ್ಪನ್ನು ತಿದ್ದಿಕೊಂಡು ಮುನ್ನಡೆದಿದ್ದೇನೆ. ನನ್ನ ಪತ್ನಿಯೇ ನನ್ನನ್ನು ತಿದ್ದಿದ್ದಾಳೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.