ADVERTISEMENT

ಎಚ್‌ಎಂಟಿ ಪುನಶ್ಚೇತನ: ಪ್ರಸ್ತಾವ ಸಲ್ಲಿಸಲು ಎಚ್‌ಡಿಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:43 IST
Last Updated 22 ಜೂನ್ 2024, 15:43 IST
<div class="paragraphs"><p>&nbsp;ಎಚ್‌ಡಿಕೆ</p></div>

 ಎಚ್‌ಡಿಕೆ

   

ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಮಶೀನ್‌ ಅಂಡ್‌ ಟೂಲ್ಸ್‌ (ಎಚ್‌ಎಂಟಿ) ಕಂಪನಿಯ ಪುನಶ್ಚೇತನ ಮತ್ತು ಚಟುವಟಿಕೆಗಳ ವಿಸ್ತರಣೆ ಕುರಿತು ಪ್ರಸ್ತಾವ ಸಲ್ಲಿಸುವಂತೆ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಶನಿವಾರ ಸೂಚಿಸಿದರು.

ಎಚ್‌ಎಂಟಿ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಕೊಹ್ಲಿ ಮತ್ತು ಇತರ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, ಎಚ್‌ಎಂಟಿ ಪುನಶ್ಚೇತನದ ಅವಕಾಶಗಳ ಕುರಿತು ಚರ್ಚಿಸಿದರು. ಕಂಪನಿಯ ವಹಿವಾಟು, ನಿವ್ವಳ ಲಾಭ, ಉತ್ಪಾದನೆ ಮತ್ತು ಇತರ ಚಟುವಟಿಕೆಗಳ ಕುರಿತು ಅಧಿಕಾರಿಗಳು ಮಾಹಿತಿ ಒದಗಿಸಿದರು. ಎಚ್‌ಎಂಟಿಯ ಉತ್ಪಾದನಾ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರ ನೀಡಿದರು.

ADVERTISEMENT

‘ಒಂದು ಕಾಲಘಟ್ಟದಲ್ಲಿ ವೈಭವಯುತವಾಗಿ ಮೆರೆದಿದ್ದ ಕಂಪನಿ ಈಗ ದುಸ್ಥಿತಿಗೆ ತಲುಪಿದೆ. ಅದನ್ನು ಮತ್ತೆ ಸದೃಢಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕಿದೆ. ಎಚ್‌ಎಂಟಿ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಆತ್ಮನಿರ್ಭರ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ಅವರ ಚಿಂತನೆಯ ಹಾದಿಯಲ್ಲೇ ಎಚ್‌ಎಂಟಿ ಕಂಪನಿಯನ್ನೂ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ನೆರವು ಒದಗಿಸುತ್ತದೆ’ ಎಂದು ಅಧಿಕಾರಿಳಿಗೆ ಭರವಸೆ ನೀಡಿದರು.

ಎಚ್‌ಎಂಟಿ ರಕ್ಷಣಾ ಇಲಾಖೆ ಮತ್ತು ಬಾಹ್ಯಾಕಾಶ ಸಂಶೋಧನಾ ಯೋಜನೆಗಳಿಗೆ ಪರಿಕರಗಳನ್ನು ತಯಾರಿಸಿಕೊಡುತ್ತಿದೆ. ದೇಶದ ಉದ್ದಗಲಕ್ಕೆ ಕಂಪನಿಯ ಉತ್ಪಾದನಾ ಘಟಕಗಳಿವೆ. ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಕಂಪನಿಯ ಕ್ಷಮತೆ ಹೆಚ್ಚಿಸಬೇಕು ಎಂದು ಸೂಚಿಸಿದರು.

ಕಂಪನಿ ಅನುಭವಿಸುತ್ತಿರುವ ನಷ್ಟ, ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳು ಸೇರಿದಂತೆ ಸಮಸ್ಯೆಗಳ ವಿವರವನ್ನೂ ರಾಜೇಶ್‌ ಕೊಹ್ಲಿ ನೀಡಿದರು. ಸಮಸ್ಯೆಗಳ ಇತ್ಯರ್ಥಕ್ಕೆ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದರು.

ಕೋಲಾರ ಸಂಸದ ಮಲ್ಲೇಶ್ ಬಾಬು, ಕಂಪನಿಯ ನಿರ್ದೇಶಕಿ ಸಮೀನಾ ಕೊಹ್ಲಿ ಮತ್ತು ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.