ಬೆಂಗಳೂರು: ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್) ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಲಿದ್ದು, ಕಂಪನಿಯ ಪುನಶ್ಚೇತನ ಮತ್ತು ಸಂಡೂರಿನಲ್ಲಿ ಗಣಿಗಾರಿಕೆ ಆರಂಭ ಕುರಿತು ಚರ್ಚಿಸಲಿದ್ದಾರೆ.
ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಬಳಿಕ ಕೆಐಒಸಿಎಲ್ ಚಟುವಟಿಕೆಗಳು ತಗ್ಗಿವೆ. ಸಂಡೂರಿನ ದೇವದಾರಿಯಲ್ಲಿ 958 ಎಕರೆ 36 ಗುಂಟೆ ವಿಸ್ತೀರ್ಣದಲ್ಲಿ ಗಣಿಗಾರಿಕೆ ನಡೆಸಲು ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಒಪ್ಪಿಗೆ ನೀಡಿದ್ದಾರೆ. ಸಂಡೂರಿನ ಸ್ವಾಮಿಮಲೈ ಪ್ರದೇಶದ ‘ಹದ್ದಿನಪಡೆ’ ಬ್ಲಾಕ್‌ನಲ್ಲಿ 1,074 ಎಕರೆ 24 ಗುಂಟೆ ವಿಸ್ತೀರ್ಣದಲ್ಲಿ ಕಬ್ಬಿಣದ ಅದಿರಿನ ನಿಕ್ಷೇಪ ಪತ್ತೆಗೆ ಸಮೀಕ್ಷೆ ನಡೆಸಲು ಅನುಮತಿ ನೀಡುವಂತೆಯೂ ಕೆಐಒಸಿಎಲ್ ಪ್ರಸ್ತಾವ ಸಲ್ಲಿಸಿದೆ.
ಕೆಐಒಸಿಎಲ್ ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಹೊರ ರಾಜ್ಯಗಳಿಂದ ಅದಿರು ತರಿಸಿಕೊಂಡು ಸಣ್ಣ ಪ್ರಮಾಣದಲ್ಲಿ ಉಕ್ಕಿನ ಉಂಡೆಗಳನ್ನಷ್ಟೇ ಉತ್ಪಾದಿಸುತ್ತಿದೆ. ಸ್ವಂತ ಗಣಿಗಾರಿಕೆ ಮೂಲಕ ಚಟುವಟಿಕೆಯನ್ನು ಪುನಃ ವಿಸ್ತರಿಸಲು ಕಂಪನಿ ಉದ್ದೇಶಿಸಿದೆ.
ದೇವದಾರಿ ಮತ್ತು ‘ಹದ್ದಿನಪಡೆ’ ಬ್ಲಾಕ್ ಎರಡೂ ಯೋಜನೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯೊಳಗೆ ಬರುತ್ತವೆ. ಈ ಕಾರಣದಿಂದ ಅಲ್ಲಿನ ಪರಿಸರಾಸಕ್ತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಗಣಿಗಾರಿಕೆ ಪ್ರದೇಶದಲ್ಲಿ ಅರಣ್ಯ ನಾಶದ ಪ್ರಮಾಣ, ಸ್ಥಳೀಯರ ವಿರೋಧದ ಕುರಿತು ಕುಮಾರಸ್ವಾಮಿ ಅವರು ಕಂಪನಿಯ ಅಧಿಕಾರಿಗಳ ಜತೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಐಒಸಿಎಲ್ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರಸ್ತಾವಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಗಳಿವೆ. ಮಂಗಳೂರಿನಲ್ಲಿರುವ ಉಕ್ಕು ತಯಾರಿಕಾ ಘಟಕದ ಕಾರ್ಯಾಚರಣೆ, ಹೊಸ ಉತ್ಪನ್ನಗಳ ಉತ್ಪಾದನೆ ಬಗ್ಗೆಯೂ ಕೇಂದ್ರ ಸಚಿವರು ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.