ADVERTISEMENT

ಹ್ಯಾಕರ್‌ ಶ್ರೀಕೃಷ್ಣ ಪ್ರಕರಣ: ಚಿನ್ನಾಭರಣ ಉದ್ಯಮಿ ಮಗನ ಮನೆಯಲ್ಲಿ ಡ್ರಗ್ಸ್?

ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ: ವಿವಿಧೆಡೆ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 19:36 IST
Last Updated 7 ನವೆಂಬರ್ 2021, 19:36 IST
ವಿಷ್ಣು ಭಟ್ (ಎಡ), ಹ್ಯಾಕರ್‌ ಶ್ರೀಕೃಷ್ಣ (ಬಲ)
ವಿಷ್ಣು ಭಟ್ (ಎಡ), ಹ್ಯಾಕರ್‌ ಶ್ರೀಕೃಷ್ಣ (ಬಲ)   

ಬೆಂಗಳೂರು: ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಬಂಧಿಸಲಾಗಿರುವ ಚಿನ್ನಾಭರಣ ಉದ್ಯಮಿ ಮಗ ವಿಷ್ಣು ಭಟ್ ಮನೆ ಮೇಲೆ ಜೀವನ್‌ಭಿಮಾನಗರ ಠಾಣೆ ಪೊಲೀಸರು ಭಾನುವಾರ ದಾಳಿ ಮಾಡಿದ್ದು, ವಿವಿಧ ಬಗೆಯ ಡ್ರಗ್ಸ್ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

‘ವಾಸವಿದ್ದ ಹೋಟೆಲ್ ಸಿಬ್ಬಂದಿ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದ ಆರೋಪದಡಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಹಾಗೂ ನಗರದ ಜ್ಯುವೆಲರ್ಸ್ ಮಳಿಗೆಯೊಂದರ ಮಾಲೀಕನ ಮಗ ವಿಷ್ಣುಭಟ್‌ನನ್ನು ಶನಿವಾರ ಬಂಧಿಸಲಾಗಿತ್ತು. ಅವರಿಬ್ಬರು ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪಿಗಳು, ತಮ್ಮ ಮನೆ ಹಾಗೂ ಹೋಟೆಲ್‌ ಕೊಠಡಿಗಳಲ್ಲಿ ಸೇವಿಸುತ್ತಿದ್ದರು. ಡ್ರಗ್ಸ್ ನಶೆಯಲ್ಲಿದ್ದ ವೇಳೆಯಲ್ಲೇ ಹೋಟೆಲ್ ಸಿಬ್ಬಂದಿ ಹಾಗೂ ವ್ಯವಸ್ಥಾಪಕರ ಮೇಲೆ ಹಲ್ಲೆ ಮಾಡಿದ್ದರು’ ಎಂದೂ ಹೇಳಿದರು.

ADVERTISEMENT

‘ಡ್ರಗ್ಸ್ ಸಂಗ್ರಹವಿಟ್ಟಿದ್ದ ಮಾಹಿತಿ ಮೇರೆಗೆ ವಿಷ್ಣು ಭಟ್‌ಗೆ ಸೇರಿದ್ದ ಇಂದಿರಾ ನಗರದಲ್ಲಿರುವ ಮನೆ ಮೇಲೆ ಭಾನುವಾರ ದಾಳಿ ಮಾಡಲಾಯಿತು. ಆಲ್ಫ್ರಝೋಲಮ್, ಗಾಂಜಾ ಪುಡಿ ತುಂಬಿದ್ದ ಐದು ಸಿಗರೇಟ್‌ಗಳು
ಹಾಗೂ ಗಾಂಜಾ ಪುಡಿ ಇದ್ದ ಪೊಟ್ಟಣಗಳು ಮನೆಯಲ್ಲಿ ಪತ್ತೆ ಆಗಿವೆ. ಅವುಗಳನ್ನು ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದರು.

‘ಶ್ರೀಕೃಷ್ಣ ವಾಸವಿದ್ದ ಕೊಠಡಿ ಮೇಲೂ ದಾಳಿ ಮಾಡಲಾಯಿತು. ಆದರೆ, ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ’ ಎಂದೂ ಹೇಳಿದರು.

ಕಸ್ಟಡಿಗೆ ಕೋರಿಕೆ: ‘ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಾಗುವುದು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಇದೇ ಆರೋಪಿ
ಗಳು, ಮತ್ತಷ್ಟು ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದರು.

‘ಇಬ್ಬರೂ ಮಾದಕ ವ್ಯಸನಿಗಳು. ವಿಚಾರಣೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ನಗು
ವುದು ಹಾಗೂ ಅಳುವುದು ಮಾಡುತ್ತಿದ್ದಾರೆ. ತನಿಖೆಗೆ ಸಹಕರಿಸುತ್ತಿಲ್ಲ. ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.