ADVERTISEMENT

HAL ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯ: ಕನ್ನಡದಲ್ಲಿ ಪರೀಕ್ಷೆ ನಡೆಸಲು ಆಗ್ರಹ

ಕನ್ನಡದಲ್ಲಿ ಪರೀಕ್ಷೆ ನಡೆಸಲು ಸಾಹಿತಿಗಳು, ಹೋರಾಟಗಾರರು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 23:30 IST
Last Updated 3 ಅಕ್ಟೋಬರ್ 2024, 23:30 IST
   

ಬೆಂಗಳೂರು: ‘ಎಚ್‌ಎಎಲ್ (ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌) ಇತ್ತೀಚೆಗೆ ನಡೆಸಿದ ನೇಮಕಾತಿಯಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಕನ್ನಡಿಗರನ್ನು ಕಡೆಗಣಿಸಿದೆ’ ಎಂದು ಸಾಹಿತಿಗಳು ಹಾಗೂ ಕನ್ನಡ ಪರ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಗೆಳೆಯರ ಬಳಗದ ನೇತೃತ್ವದಲ್ಲಿ ಎಲ್. ಹನುಮಂತಯ್ಯ, ದೊಡ್ಡರಂಗೇಗೌಡ, ‘ಮುಖ್ಯಮಂತ್ರಿ’ ಚಂದ್ರು, ಟಿ.ಎಸ್. ನಾಗಾಭರಣ, ಮನು ಬಳಿಗಾರ್, ರಾ.ನಂ. ಚಂದ್ರಶೇಖರ, ವ.ಚ. ಚನ್ನೇಗೌಡ, ಆರ್. ಶೇಷಶಾಸ್ತ್ರಿ ಹಾಗೂ ಎಚ್.ಟಿ.ಪೋತೆ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 

‘ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಸಂಸ್ಥಾನದ ನೆರವಿನಿಂದ ಸ್ಥಾಪನೆಯಾದ ಎಚ್‌ಎಎಲ್, ನೇಮಕಾತಿಗೆ ಸಂಬಂಧಿಸಿದಂತೆ ಸ್ಥಳೀಯರನ್ನು ಕಡೆಗಣಿಸಿದೆ. ಹೊರ ರಾಜ್ಯದ ಶೇ 90 ರಷ್ಟು ಅಭ್ಯರ್ಥಿಗಳನ್ನು ನಿಶ್ಚಿತ ಅವಧಿಯ ಹುದ್ದೆಗಳಿಗೆ ಆಯ್ಕೆ ಮಾಡಿದೆ. ಸ್ಥಳೀಯ ಕನ್ನಡಿಗರನ್ನು ಉದ್ಯೋಗ ವಂಚಿತರನ್ನಾಗಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಕಾರ್ಖಾನೆಯ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ.

ADVERTISEMENT

‘ನೇರವಾಗಿ ಅಂತರ್ಜಾಲದ ಮೂಲಕ ಲಘು ಯುದ್ಧ ವಿಮಾನ (ಎಲ್‌ಸಿಎ) ತೇಜಸ್ ವಿಭಾಗದಲ್ಲಿ 166 ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿದೆ. ಈ ಹುದ್ದೆಗಳಿಗೆ 150ಕ್ಕೂ ಹೆಚ್ಚು ಉತ್ತರ ಭಾರತೀಯರನ್ನು ಆಯ್ಕೆ ಮಾಡಲಾಗಿದೆ. ಫಿಟ್ಟರ್, ಮಷಿನಿಸ್ಟ್, ಎಲೆಕ್ಟ್ರಿಷಿಯನ್‌ ಹುದ್ದೆಗಳಿಗೂ ಸ್ಥಳೀಯರನ್ನು ಕಡೆಗಣಿಸಿರುವ ಈ ಆಯ್ಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಹೊಸದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಎಚ್‌ಎಎಲ್ ತಾಂತ್ರಿಕ ತರಬೇತಿ ಇಲಾಖೆಯ ಮೂಲಕವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

‘ಹಿಂದಿಯ ಬದಲು ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕನ್ನಡದಲ್ಲಿ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಇಲ್ಲಿನ ಸಂಸದರು ಮಧ್ಯ ಪ್ರವೇಶಿಸಿ, ಕನ್ನಡಿಗರಿಗೆ ಆಗುತ್ತಿರುವ ವಂಚನೆಯನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.