ADVERTISEMENT

ಬಸವಾದಿ ಶರಣರ ಪರಿಚಯಿಸಿದ ಹಳಕಟ್ಟಿ: ಎಂ.ಬಿ. ಪಾಟೀಲ

ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:58 IST
Last Updated 9 ಜುಲೈ 2024, 15:58 IST
<div class="paragraphs"><p>ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ಬಿ.ಪಾಟೀಲ, ಸಾಹಿತಿ ಚಂದ್ರಶೇಖರ ಕಂಬಾರ, ಶರಣ ಸಾಹಿತ್ಯ ಪರಿಷತ್ತಿನ&nbsp;ಬೆಂಗಳೂರು ನಗರ ಘಟಕದ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ತೋಂಟದ ಸಿದ್ಧರಾಮ ಸ್ವಾಮೀಜಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಾ ಗರಡಿ&nbsp;ಅವರು ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು&nbsp;</p></div>

ಫ.ಗು. ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ಬಿ.ಪಾಟೀಲ, ಸಾಹಿತಿ ಚಂದ್ರಶೇಖರ ಕಂಬಾರ, ಶರಣ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ತೋಂಟದ ಸಿದ್ಧರಾಮ ಸ್ವಾಮೀಜಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಪ್ರಮೀಳಾ ಗರಡಿ ಅವರು ಫ. ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು 

   

ಬೆಂಗಳೂರು: ‘ಫ.ಗು. ಹಳಕಟ್ಟಿ ಅವರು ವಚನ ಸಂರಕ್ಷಣೆಯ ಕೆಲಸ‌ ಮಾಡದಿದ್ದರೆ ಬಸವಾದಿ ಶರಣರ ಬಗ್ಗೆ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ತಿಳಿಸಿದರು. 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಜಂಟಿಯಾಗಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ADVERTISEMENT

‘ಫ.ಗು. ಹಳಕಟ್ಟಿ ಅವರು ಹತ್ತು ಸಾವಿರ ವಚನಗಳನ್ನು ಸಂಗ್ರಹಿಸಿದ್ದರು. ಅವರಿಂದಾಗಿ 250 ವಚನಕಾರರು ಮಹತ್ವ ಗೊತ್ತಾಗಿದೆ. ಬಿ.ಎಂ.ಶ್ರೀ‌ ಅವರು ಹೇಳಿದ ಹಾಗೆ ಹಳಕಟ್ಟಿ ಅವರು ವಚನ‌ ಗುಮ್ಮಟವಾಗಿದ್ದರು. ಮಂಗಳೂರಿನ ಬಾಸೆಲ್ ಮಿಷನ್ ಸಂಸ್ಥೆಯು ಕ್ರೈಸ್ತ ಧರ್ಮಕ್ಕೆ ಧಕ್ಕೆ ಆಗುತ್ತದೆ ಎಂದು ಹೇಳಿ ಹಳಕಟ್ಟಿ ಅವರು ಕೊಟ್ಟ ವಚನಗಳನ್ನು ಮುದ್ರಿಸಿರಲಿಲ್ಲ. ಆಗ ಹಳಕಟ್ಟಿ ಅವರು ಸ್ವಂತ ಮನೆ ಮಾರಾಟ ಮಾಡಿ, ವಚನಗಳನ್ನು ಅಚ್ಚು ಹಾಕಿಸಿದರು. ಬಸವಣ್ಣನಂತೆಯೇ ಹಳಕಟ್ಟಿ ಅವರೂ ನಿತ್ಯ ಸ್ಮರಣೀಯರು’ ಎಂದರು. 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ ಮಾತನಾಡಿ, ‘12ನೇ ಶತಮಾನದ ವಚನ ಸಾಹಿತ್ಯವನ್ನು ಪುನರ್ ಸೃಷ್ಟಿಸಿದ‌ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲಬೇಕು. ಅವರು ಸಮಾಜದ ಎಲ್ಲ ಕ್ಷೇತ್ರಗಳಿಗೂ ಸೇವೆಯ ಸ್ಪರ್ಶ ನೀಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡುವುದಾಗಿ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಸರ್ಕಾರವು 31 ಜಿಲ್ಲೆಗಳಲ್ಲಿರುವ ಪ್ರತಿ ಘಟಕಕ್ಕೂ ತಲಾ ₹ 4 ಲಕ್ಷ ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ‘ಈ ಬಗ್ಗೆ ಮುಖ್ಯಮಂತ್ರಿಯವರ ಜತೆಗೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು. 

ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಗೌರವ ತಂದುಕೊಟ್ಟಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.