ADVERTISEMENT

Happy New Year 2024 | ಹೊಸ ವರ್ಷಾಚರಣೆ: ರಂಗೇರಿದ ಸಂಭ್ರಮ

2024ಕ್ಕೆ ಅದ್ದೂರಿ ಸ್ವಾಗತ: ಕುಣಿದು ಕುಪ್ಪಳಿಸಿದ ಯುವಕ– ಯುವತಿಯರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 0:30 IST
Last Updated 1 ಜನವರಿ 2024, 0:30 IST
ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ಹೊಸ ವರ್ಷದ ಸ್ವಾಗತಕ್ಕೆ ಆಗಮಿಸಿದ್ದ ಪುಟಾಣಿ ಸಂಭ್ರಮಿಸಿದ್ದು ಹೀಗೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ಹೊಸ ವರ್ಷದ ಸ್ವಾಗತಕ್ಕೆ ಆಗಮಿಸಿದ್ದ ಪುಟಾಣಿ ಸಂಭ್ರಮಿಸಿದ್ದು ಹೀಗೆ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಹರ್ಷೋದ್ಗಾರ, ಪರಸ್ಪರ ಶುಭಾಶಯ ವಿನಿಮಯ, ಪಟಾಕಿಗಳ ಚಿತ್ತಾರಗಳಿಂದ ಕಂಗೊಳಿಸಿದ ಸಿಲಿಕಾನ್ ಸಿಟಿ. ರಸ್ತೆಗಳು, ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ನೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ ಯುವಕ–ಯುವತಿಯರು. ಕೇಕೆ, ಶಿಳ್ಳೆ ಹಾಕುವ ಮೂಲಕ ಮೊಳಗಿದ ‘ಹ್ಯಾಪಿ ನ್ಯೂ ಇಯರ್‌’ ಘೋಷಣೆ.

ಇದು ಹೊಸ ವರ್ಷಾಚರಣೆಯ ವೇಳೆ ನಗರದಲ್ಲಿ ಭಾನುವಾರ ಕಂಡುಬಂದ ದೃಶ್ಯಾವಳಿಗಳು.

2023ಕ್ಕೆ ವಿದಾಯ ಹೇಳಿ, 2024 ಅನ್ನು ನವೋಲ್ಲಾಸದಿಂದ ಜನರು ಮಧ್ಯರಾತ್ರಿ ಸ್ವಾಗತಿಸಿದರು.

ADVERTISEMENT

ನಗರದಲ್ಲಿ ಭಾನುವಾರ ಮಧ್ಯರಾತ್ರಿ 1 ಗಂಟೆ ವರೆಗೆ ಹೊಸ ವರ್ಷಾಚರಣೆಗೆ ಪೊಲೀಸ್‌ ಇಲಾಖೆ ಅವಕಾಶ ಕಲ್ಪಿಸಿತ್ತು. ಹಲವೆಡೆ ಅವಧಿಗೂ ಮೀರಿ ಆಚರಣೆ ನಡೆಯಿತು. ರಸ್ತೆಗಳು ರಂಗು ಪಡೆದುಕೊಂಡಿದ್ದವು. ಒಮ್ಮೆಲೇ ಪ್ರವಾಹದಂತೆ ಜನರು ಬಂದರು. 10 ಗಂಟೆಯ ನಂತರ ಎಂ.ಜಿ ರಸ್ತೆಯತ್ತ ಬರುವ ಜನರ ಸಂಖ್ಯೆ ಹೆಚ್ಚಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ದಟ್ಟಣೆ ನಿಯಂತ್ರಣಕ್ಕೆ ಹರಸಾಹಸಪಟ್ಟರು. ರಸ್ತೆಗಳಲ್ಲಿ ಗುಂಪು ಗುಂಪಾಗಿ ಕೇಕೆ ಹಾಕುತ್ತಾ ಸಂಚರಿಸುತ್ತಿದ್ದರು.

ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ರಸ್ತೆ, ಬ್ರಿಗೇಡ್‌ ರಸ್ತೆ, ಕೋರಮಂಗಲ, ಇಂದಿರಾ ನಗರದ 100 ಅಡಿ ರಸ್ತೆಯಲ್ಲಿ ಸಂಭ್ರಮ ಮೇರೆ ಮೀರಿತ್ತು. ಅಂಗಡಿ, ಹೋಟೆಲ್‌ಗಳ ಎದುರು ಅಲಂಕಾರಿಕ ವಿದ್ಯುತ್‌ ದೀಪಗಳು ಕಣ್ಣುಕೋರೈಸುತ್ತಿದ್ದವು. ಝಗಮಗಿಸುವ ದೀಪಗಳ ಬೆಳಕಿನಲ್ಲಿ ಅಬ್ಬರದ ಸಂಗೀತಕ್ಕೆ ಪಬ್‌, ಕ್ಲಬ್‌ಗಳಲ್ಲಿ ಯುವಕ– ಯುವತಿಯರು ಪರಸ್ಪರ ಕೈಕೈ ಹಿಡಿದು ಹೆಜ್ಜೆ ಹಾಕಿದರು. ಕೆಲವು ಭಾಗದ ಪಬ್‌ಗಳಲ್ಲಿ ಸಂಜೆಯಿಂದಲೇ ಹೊಸ ವರ್ಷದ ಪಾರ್ಟಿಗಳು ರಂಗೇರಿದ್ದವು.

ಎಂ.ಜಿ. ರಸ್ತೆಯಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಸ್ತೆಗೆ ಬಂದರು. ಪ್ರಮುಖ ರಸ್ತೆಗಳಲ್ಲಿ ನಡೆದ ಹೊಸ ವರ್ಷಾಚರಣೆಯು ರಂಗು ರಂಗಾಗಿತ್ತು. ಫ್ಯಾಷನ್ ಉಡುಗೆಗಳನ್ನು ತೊಟ್ಟ ಯುವಕ–ಯುವತಿಯರ ಓಡಾಟ ನೆರೆದಿದ್ದವರ ಗಮನ ಸೆಳೆಯಿತು. ನಗರ, ಹೊರ ಜಿಲ್ಲೆ, ರಾಜ್ಯ ಹಾಗೂ ಹೊರ ದೇಶಗಳಿಂದಲೂ ಬಂದಿದ್ದ ಜನ, ತಮ್ಮ ಅಭಿರುಚಿಗೆ ತಕ್ಕಂತೆ ಹೊಸ ವರ್ಷಾಚರಣೆ ಮಾಡಿದರು. ಹೊಸವರ್ಷದ ಮೊದಲ ಕ್ಷಣವನ್ನೂ ಅವಿಸ್ಮರಣೀಯ ಮಾಡಿಕೊಂಡರು.

ಹೊಸ ವರ್ಷಕ್ಕೆ ಮದ್ಯ ಮತ್ತಷ್ಟು ರಂಗು ತುಂಬಿತ್ತು. ಪಬ್‌ಗಳಲ್ಲಿ ಮದ್ಯ ಸೇವಿಸಿದವರು ರಸ್ತೆಗಳಲ್ಲಿ ಕೇಕೆ ಹಾಕಿ ನೃತ್ಯ ಮಾಡಿದರು. ಮದ್ಯ ಸೇವಿಸಿ ಬಳಲಿದವರಿಗೆ ಸುರಕ್ಷಾ ದ್ವೀಪದಲ್ಲಿ ಉಪಚರಿಸಲಾಯಿತು.

ಪಬ್‌ಗಳಲ್ಲಿ ಭರ್ಜರಿ ವ್ಯಾಪಾರ:

ಪಬ್‌ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಬೇಕರಿಗಳಲ್ಲಿ ವಿಭಿನ್ನವಾದ ಕೇಕ್‌ ತಯಾರಿಸಲಾಗಿತ್ತು. ಬೆಳಿಗ್ಗೆಯಿಂದಲೂ ಬೇಕರಿಗಳ ಮುಂದೆ ಜನದಟ್ಟಣೆ ಕಂಡುಬಂತು. ಹೊಸ ವಿನ್ಯಾಸದ ಕೇಕ್‌ಗಳನ್ನು ಕತ್ತರಿಸಿ ಜನರು ಸಂಭ್ರಮಿಸಿದರು.

ಅಪಾರ್ಟ್‌ಮೆಂಟ್‌ನಲ್ಲೂ ಆಚರಣೆ:

ಹೊಸ ವರ್ಷವನ್ನು ಸ್ವಾಗತಿಸಲು ಅಪಾರ್ಟ್‌ಮೆಂಟ್‌ಗಳು ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಅಪಾರ್ಟ್‌ಮೆಂಟ್‌ ಸಂಘದವರೂ ಪಾರ್ಟಿಗಳನ್ನು ಆಯೋಜಿಸಿದ್ದರು. ಹಾಡು, ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆದವು.

ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಬಡಾವಣೆ, ಅಶೋಕ ನಗರ, ಮತ್ತಿಕೆರೆ, ಕೆಂಗೇರಿ, ಬಸವನಗುಡಿ, ಜಯನಗರ, ಜೆಪಿ ನಗರ, ಪೀಣ್ಯ, ಮಲ್ಲೇಶ್ವರ, ಶೇಷಾದ್ರಿಪುರ, ದೀಪಾಂಜಲಿ ನಗರ, ಸುಬ್ರಹ್ಮಣ್ಯ ನಗರ, ಯಶವಂತಪುರ, ಜಾಲಹಳ್ಳಿ, ದಾಸರಹಳ್ಳಿ, ಎಚ್‌ಎಸ್‌ಆರ್‌ ಲೇಔಟ್, ಇಂದಿರಾನಗರ, ದೊಮ್ಮಲೂರು ಸೇರಿದಂತೆ ನಗರದ ಎಲ್ಲೆಡೆ ಹೊಸವರ್ಷವನ್ನು ಅದ್ದೂರಿಯಿಂದ ಸ್ವಾಗತಿಸಲಾಯಿತು.

ರೆಸಾರ್ಟ್‌ನತ್ತ ಜನರು:

ಈ ವರ್ಷ ರೆಸಾರ್ಟ್‌ಗಳು ಜನರಿಂದ ಭರ್ತಿಯಾಗಿದ್ದವು. ರೆಸಾರ್ಟ್‌ನ ಹೊರ ಆವರಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನು ನಗರದ ಕೆಲವರು ಮಡಿಕೇರಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಸಕಲೇಶಪುರ, ಮೂಡಿಗೆರೆ, ಶಿವಮೊಗ್ಗ, ಸಾಗರದತ್ತ ಹೊಸ ವರ್ಷಾಚರಣೆಗೆ ತೆರಳಿದ್ದರು.  

ಎಂ.ಜಿ ರಸ್ತೆ, ಕೋರಮಂಗಲದ 100 ಅಡಿ ರಸ್ತೆ, ಇಂದಿರಾನಗರ, ಮೆಜೆಸ್ಟಿಕ್ ಬಳಿ ಮಹಿಳಾ ಸುರಕ್ಷಾ ಕೇಂದ್ರ ಸ್ಥಾಪಿಸಲಾಗಿತ್ತು. ಅಲ್ಲಿ ವೈದ್ಯರು ಹಾಗೂ ನರ್ಸ್‌ಗಳನ್ನು ನಿಯೋಜಿಸಲಾಗಿತ್ತು. ಅಸ್ವಸ್ಥರಾಗಿ ಬಂದ ಯುವತಿಯರನ್ನು ಕೆಲವು ಕೇಂದ್ರಗಳಲ್ಲಿ ಉಪಚರಿಸಿ ಮನೆಗೆ ಕಳುಹಿಸಲಾಯಿತು.

ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ರಾತ್ರಿ ಭದ್ರತೆ ಪರಿಶೀಲಿಸಿದ ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಕೇಂದ್ರ ವಿಭಾಗದಲ್ಲಿ ನಾಲ್ವರು ಡಿಸಿಪಿ ಹಾಗೂ 3000 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

–ಶೇಖರ್ ಡಿಸಿಪಿ ಕೇಂದ್ರ ವಿಭಾಗ

ಕಿಕ್ಕಿರಿದು ತುಂಬಿದ ಮೆಟ್ರೊ

ಹೊಸ ವರ್ಷಾಚರಣೆಯ ಸಂಭ್ರಮಕ್ಕಾಗಿ ಬ್ರಿಗೇಡ್‌ ರಸ್ತೆ ಚರ್ಚ್‌ ಸ್ಟ್ರೀಟ್‌ಗಳಿಗೆ ಜನರು ಭಾನುವಾರ ಮಧ್ಯಾಹ್ನದಿಂದಲೇ ಬರತೊಡಗಿದ್ದರಿಂದ ‘ನಮ್ಮ ಮೆಟ್ರೊ’ ಪ್ರಯಾಣಿಕರಿಂದ ತುಂಬಿ ಹೋಗಿತ್ತು.ಸಂಜೆಯಾಗುತ್ತಿದ್ದಂತೆ ನಿಂತುಕೊಳ್ಳುವುದಕ್ಕೂ ಜಾಗ ಇಲ್ಲದಷ್ಟು ಜನರ ಪ್ರವಾಹ ಹರಿದು ಬಂತು. ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲಿನಂತೆ ಸಂಚರಿಸಿದವು. ರಾತ್ರಿ 11 ಗಂಟೆಯವರೆಗೂ ಜನರು ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದರು. ಇದರಲ್ಲಿ ಯುವಜನರ ಪ್ರಮಾಣವೇ ಹೆಚ್ಚಿತ್ತು. 11 ಗಂಟೆಯಾಗುತ್ತಿದ್ದಂತೆ ಮೆಟ್ರೊ ರೈಲು ಎಂ.ಜಿ. ರೋಡ್‌ ನಿಲ್ದಾಣದಲ್ಲಿ ನಿಲುಗಡೆ ನೀಡುವುದನ್ನು ನಿಲ್ಲಿಸಲಾಯಿತು. ಬಳಿಕ ಬರುವವರು ಟ್ರಿನಿಟಿ ನಿಲ್ದಾಣ ಮತ್ತು ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಇಳಿದು ಆಗಮಿಸಿದರು. ರಾತ್ರಿ 12 ಗಂಟೆಗೆ ಹೊಸ ವರ್ಷವನ್ನು ಬರಮಾಡಿಕೊಂಡ ಜನರು ವಾಪಸಾಗಲು ಮೆಟ್ರೊ ಹಿಡಿಯಲು ಮತ್ತೆ ಟ್ರಿನಿಟಿ ನಿಲ್ದಾಣ ಮತ್ತು ಕಬ್ಬನ್‌ ಪಾರ್ಕ್‌ ನಿಲ್ದಾಣಗಳ ಕಡೆಗೆ ಸಾಗಿದರು. ರಾತ್ರಿ 2 ಗಂಟೆಯವರೆಗೆ ಮೆಟ್ರೊ ಸೇವೆಯನ್ನು ವಿಸ್ತರಿಸಲಾಗಿತ್ತು. ಪ್ರತಿ 15 ನಿಮಿಷಕ್ಕೊಂದು ರೈಲು ಸಂಚರಿಸಿದವು. ಎಲ್ಲ ನಾಲ್ಕು ಟರ್ಮಿನಲ್‌ಗಳಿಂದ ರಾತ್ರಿ 1.30ಕ್ಕೆ ಕೊನೆಯ ಮೆಟ್ರೊ ರೈಲುಗಳು ಹೊರಟವು. ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್‌ ನಿಲ್ದಾಣದಿಂದ ನಾಲ್ಕು ಟರ್ಮಿನಲ್‌ಗಳಿಗೆ 2.15ಕ್ಕೆ ಕೊನೇ ಮೆಟ್ರೊಗಳು ಸಂಚರಿಸಿದವು.

ಶರ್ಟ್‌ ಹರಿದು ಯುವಕನಿಗೆ ಥಳಿತ 

ಬ್ರಿಗೇಡ್ ರಸ್ತೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ ಪ್ರೇಮಿಗಳು ತೆರಳುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಯುವಕನೊಬ್ಬ ಯುವತಿ ಮೈಮುಟ್ಟಿದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಿಯತಮ ಪ್ರೇಯಸಿ ಮೈಮುಟ್ಟಿದ ಯುವಕನಿಗೆ ಥಳಿಸಿದ್ದಾನೆ. ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಅಸಭ್ಯವಾಗಿ ವರ್ತಿಸಿದ ಯುವಕನನ್ನು ವಶಕ್ಕೆ ಪಡೆದುಕೊಂಡರು. ಜನದಟ್ಟಣೆಯ ಕೆಲವು ಪ್ರದೇಶದಲ್ಲಿ ಗುಂಪು ಗುಂಪಾಗಿ ಬಂದಿದ್ದ ಯುವಕರು ಯುವತಿಯರನ್ನು ರೇಗಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ಮದ್ಯ ಅಮಲಿನಲ್ಲಿ ಯುವಕನನ್ನು ಅಡ್ಡಗಟ್ಟಿ ಶರ್ಟ್‌ ಅನ್ನು ಹರಿದು ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಗುಂಪಿನಲ್ಲಿದ್ದವರು ಸಹ ಮದ್ಯ ಸೇವಿಸಿ ತೂರಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರಾತ್ರಿ 1 ಗಂಟೆ ನಂತರ ಏಕಕಾಲದಲ್ಲಿ ಜನರು ಅಪಾರ ಸಂಖ್ಯೆಯಲ್ಲಿ ವಾಪಸ್‌ ಆಗಲು ಮುಂದಾದರು. ಆಗ ನೂಕುನುಗ್ಗಲು ಉಂಟಾಯಿತು. ಅಲ್ಲಲ್ಲಿ ತಳ್ಳಾಟ ನಡೆಯಿತು. ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.  

ಎಲ್ಲೆಡೆ ಪೊಲೀಸ್‌ ಕಾವಲು

ಪ್ರಮುಖ ರಸ್ತೆಗಳಲ್ಲಿ 10 ಗಂಟೆ ಬಳಿಕ ವಾಹನ ಸಂಚಾರ ನಿರ್ಬಂಧಿಸಿ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಎಂ.ಜಿ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ 3 ಸಾವಿರದಷ್ಟು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಭಾನುವಾರ ಸಂಜೆ ಬಾಂಬ್‌ ತಪಾಸಣಾ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಗಿತ್ತು. ಪಾನಮತ್ತ ಚಾಲಕರ ಪತ್ತೆಗೆ 48 ವಿಶೇಷ ತಂಡ ರಚಿಸಲಾಗಿತ್ತು. ಅಲ್ಲಲ್ಲಿ ಚಾಲಕರನ್ನು ತಪಾಸಣೆಗೆ ಒಳಪಡಿಸಲಾಯಿತು. ಬೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ಅಧಿಕಾರಿಗಳೂ ಪೊಲೀಸರ ಜೊತೆಗೆ ಸಾಥ್‌ ನೀಡಿದ್ದರು. ಸ್ಥಳದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು 15 ಮಂದಿ ಡಿಸಿಪಿಗಳು 45 ಎಸಿಪಿಗಳು 160 ಇನ್‌ಸ್ಪೆಕ್ಟರ್‌ಗಳು 600 ಸಬ್‌ ಇನ್‌ಸ್ಪೆಕ್ಟರ್‌ಗಳು 600 ಎಎಸ್‌ಐ 1800 ಹೆಡ್‌ ಕಾನ್‌ಸ್ಟೆಬಲ್‌ 5200 ಕಾನ್‌ಸ್ಟೆಬಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ರಾತ್ರಿ 11ರಿಂದ ಪ್ರಮುಖ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.

ಜೈ ಶ್ರೀರಾಮ್‌ ಘೋಷಣೆ

ಹೊಸ ವರ್ಷಾಚರಣೆ ವೇಳೆ ಗುಂಪು ಗುಂಪಾಗಿ ಬಂದ ಯುವಕ–ಯುವತಿಯರು ಜೈ ಶ್ರೀರಾಮ್‌ ಹಾಗೂ ಜೈ ಮೋದಿ ಎಂದು ಘೋಷಣೆ ಕೂಗಿದರು. ಆಗ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು. 12 ಗಂಟೆಯ ಬಳಿಕ ಯುವಕ– ಯುವತಿಯರ ಘೋಷಣೆಗಳು ಜೋರಾಗಿ ಕೇಳಿಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.