ಬೆಂಗಳೂರು: ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ವಿಷ ಕುಡಿದು ಚಂದ್ರಾ ಲೇಔಟ್ ಠಾಣೆಗೆ ಬಂದಿದ್ದ ಡೆಲಿವರಿ ಬಾಯ್ ಅನಿಲ್ (30) ಎಂಬುವವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
‘ಚಂದ್ರಾ ಲೇಔಟ್ ನಿವಾಸಿ ಅನಿಲ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ವಿವಾಹಿತ ಮಹಿಳೆಗೆ ಕಿರುಕುಳ: ‘ಸ್ಥಳೀಯ ನಿವಾಸಿಯಾಗಿರುವ 40 ವರ್ಷದ ವಿವಾಹಿತ ಮಹಿಳೆ ಜೊತೆ ಹಲವು ವರ್ಷಗಳಿಂದ ಅನಿಲ್ ಅವರು ಸಲುಗೆ ಇಟ್ಟುಕೊಂಡಿದ್ದರು. ಈ ಸಂಗತಿ ಕೆಲ ತಿಂಗಳ ಹಿಂದೆಯಷ್ಟೇ ಮಹಿಳೆಯ ಪತಿಗೆ ಗೊತ್ತಾಗಿತ್ತು. ಮಹಿಳೆಯನ್ನು ಠಾಣೆಗೆ ಕರೆತಂದಿದ್ದ ಪತಿ, ದೂರು ಕೊಡಿಸಿದ್ದರು. ಮಹಿಳೆ ತಂಟೆಗೆ ಹೋಗದಂತೆ ಅನಿಲ್‌ಗೆ ಎಚ್ಚರಿಕೆ ನೀಡುವಂತೆ ಕೋರಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ಎಚ್ಚರಿಕೆ ನೀಡಿದ ಬಳಿಕವೂ ಅನಿಲ್, ಮಹಿಳೆ ಜೊತೆ ಸಂಪರ್ಕ ಸಾಧಿಸಲು ಯತ್ನಿಸಿದ್ದರು. ತಮ್ಮೊಂದಿಗೆ ಸಲುಗೆ ಮುಂದುವರಿಸುವಂತೆ ಪೀಡಿಸುತ್ತಿದ್ದರು. ಮಹಿಳೆ ಎಲ್ಲಿಗಾದರೂ ಹೋದರೆ ಹಿಂಬಾಲಿಸುತ್ತಿದ್ದರು. ರಸ್ತೆಯಲ್ಲಿ ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದರು. ಬೇಸತ್ತ ಮಹಿಳೆ, ಅನಿಲ್ ವಿರುದ್ಧ ದೂರು ನೀಡಲು ಗುರುವಾರ ಠಾಣೆಗೆ ಬಂದಿದ್ದರು’ ಎಂದು ತಿಳಿಸಿದರು.
‘ತಮ್ಮ ವಿರುದ್ಧ ಪ್ರಕರಣ ದಾಖಲಾಗುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಠಾಣೆಗೆ ಅನಿಲ್ ಬಂದಿದ್ದರು. ಅವರನ್ನು ಪಿಎಸ್‌ಐ ಮಾತನಾಡಿಸಿದ್ದರು. ‘ನನ್ನ ವಿರುದ್ಧ ಪದೇ ಪದೇ ಸುಳ್ಳು ದೂರು ನೀಡಲಾಗುತ್ತಿದೆ. ಜೀವನವೇ ಸಾಕಾಗಿದ್ದು, ಸಾಯುವುದಕ್ಕಾಗಿ ವಿಷ ಕುಡಿದು ಬಂದಿದ್ದೇನೆ’ ಎಂದು ಅನಿಲ್ ಹೇಳಿದ್ದರು. ಎಚ್ಚೆತ್ತ ಪಿಎಸ್‌ಐ ಹಾಗೂ ಸಿಬ್ಬಂದಿ, ಅನಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.
‘ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದ ನಂತರ ಅನಿಲ್ ಹೇಳಿಕೆ ಪಡೆಯಲಾಗುವುದು. ಸುಳ್ಳು ದೂರಿನ ಬಗ್ಗೆ ಹೇಳಿಕೆಯಲ್ಲಿ ಪ್ರಸ್ತಾಪಿಸಿದರೆ, ಪ್ರತ್ಯೇಕ ಪ್ರಕರಣ ದಾಖಲಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.