ADVERTISEMENT

ಮೆಟ್ರೊ ಸಿಬ್ಬಂದಿಗೆ ಕಿರುಕುಳ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 15:53 IST
Last Updated 14 ಮಾರ್ಚ್ 2024, 15:53 IST
ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಬಿಎಂಆರ್‌ಸಿಎಲ್‌ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸದಸ್ಯರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು. ಪ್ರಜಾವಾಣಿ ಚಿತ್ರ
ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರುವ ಬಿಎಂಆರ್‌ಸಿಎಲ್‌ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸದಸ್ಯರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಲ್ಲದೇ ಅಶ್ಲೀಲ ಶಬ್ದಗಳಿಂದ ನಿಂದಿಸಿರುವ ಮೆಟ್ರೊ ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ನಿಲ್ದಾಣದ ಇನ್‌ಚಾರ್ಜ್‌ ಗಜೇಂದ್ರನ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು, ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತು ನೇತೃತ್ವದಲ್ಲಿ ಗುರುವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಗೊಂಡಿತು.

ಸಂತ್ರಸ್ತ ಮಹಿಳೆಯು ಈ ಬಗ್ಗೆ ಮೆಟ್ರೊ ನಿರ್ದೇಶಕರಿಗೆ ಮತ್ತು ಸಂಬಂಧಪಟ್ಟ ‘ವಿಸ್‌ಡಂ’ ಸೆಕ್ಯೂರಿಟಿ ಏಜೆನ್ಸಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಸಂತ್ರಸ್ತೆಯನ್ನೇ ಕೆಲಸದಿಂದ ತೆಗೆದು ಹಾಕಲಾಗಿದೆ. ‘ವಿಸ್‌ಡಂ’ ಏಜೆನ್ಸಿಯ ಕಾರ್ಮಿಕ ಪರವಾನಗಿಯನ್ನು ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಕೊಳೆಬಟ್ಟೆ ಧರಿಸಿ ಬಂದ ವ್ಯಕ್ತಿಯನ್ನು ಮೆಟ್ರೊ ನಿಲ್ದಾಣದ ಒಳಗೆ ಬಿಡದ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. ಆದರೆ, ಒಳಬಿಡದಂತೆ ಆದೇಶ ಮಾಡಿದ ಮೇಲಧಿಕಾರಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಬ್ಬಂದಿಯನ್ನು ಕೆಲಸಕ್ಕೆ ಮರುನೇಮಕ ಮಾಡಬೇಕು. ಮೇಲಧಿಕಾರಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ನ್ಯಾಯ ಸಿಗುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ರಾಜ್ಯ ಕಾರ್ಮಿಕ ಪರಿಷತ್ತು ಅಧ್ಯಕ್ಷ ರವಿಶೆಟ್ಟಿ ಬೈಂದೂರು, ಸಂತ್ರಸ್ತ ಮಹಿಳೆ ಸೇರಿ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.