ADVERTISEMENT

ಏಕೀಕರಣ: ಹೋರಾಟದ ಕಿಚ್ಚುಹಚ್ಚಿದ್ದ ರಾಮಸ್ವಾಮಿ- ಬಿ.ಎಸ್‌.ಯಡಿಯೂರಪ್ಪ

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2023, 15:58 IST
Last Updated 10 ಸೆಪ್ಟೆಂಬರ್ 2023, 15:58 IST
<div class="paragraphs"><p>ನಗರದಲ್ಲಿ ಭಾನುವಾರ ನಡೆದ ಹಾರನಹಳ್ಳಿ ರಾಮಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಮಹಾತ್ಮ ಗಾಂಧಿ ಹಾಗೂ ಹಾರನಹಳ್ಳಿ ರಾಮಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. </p></div>

ನಗರದಲ್ಲಿ ಭಾನುವಾರ ನಡೆದ ಹಾರನಹಳ್ಳಿ ರಾಮಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಮಹಾತ್ಮ ಗಾಂಧಿ ಹಾಗೂ ಹಾರನಹಳ್ಳಿ ರಾಮಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

   

ಬೆಂಗಳೂರು: ‘ಅಖಂಡ ಕರ್ನಾಟಕ ಸ್ಥಾಪನೆಯು ಹಾರನಹಳ್ಳಿ ರಾಮಸ್ವಾಮಿ ಅವರ ಕಲ್ಪನೆಯ ಕೂಸಾಗಿತ್ತು. ಅವರು ಕರ್ನಾಟಕ ಏಕೀಕರಣ ಪರಿಕಲ್ಪನೆಯನ್ನು ಹೊತ್ತು ಅದಕ್ಕೆ ಮಾನ್ಯತೆ ಸಿಗುವಂತೆ ರಾಜ್ಯದಾದ್ಯಂತ ಹೋರಾಟದ ಕಿಚ್ಚುಹಚ್ಚಿದ್ದರು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಭಾರತೀಯ ವಿದ್ಯಾಭವನ, ಲೋಕ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಹಾರನಹಳ್ಳಿ ರಾಮಸ್ವಾಮಿ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ADVERTISEMENT

‘ರಾಜಕಾರಣಿಗಳ ಕಿವಿಗಳು ಎಂದೂ ತೆರೆದಿರಬೇಕು ಎಂಬ ಎಚ್ಚರಿಕೆ ಗಂಟೆಯನ್ನು ರಾಮಸ್ವಾಮಿ ಅವರು ಧ್ವನಿಸುತ್ತಲೇ ಇದ್ದರು. ಸಮಾಜದ ಕಷ್ಟಸುಖಗಳನ್ನು ಕಣ್ತೆರೆದು ನೋಡಿ ಒಳಗಣ್ಣಿನಿಂದ ನಿಲುವು ರೂಪಿಸಿಕೊಳ್ಳಬೇಕು ಎಂಬುದು ಅವರ ಉಪದೇಶ ಮಾತ್ರ ಆಗಿರಲಿಲ್ಲ. ನುಡಿದಂತೆ ನಡೆದ ಸಜ್ಜನ ರಾಜಕಾರಣಿ ಅವರಾಗಿದ್ದರು’ ಎಂದು ಹೇಳಿದರು.

‘ರಾಮಸ್ವಾಮಿ ಎಂದ ಕೂಡಲೇ ಲೋಕ ಶಿಕ್ಷಣ ಟ್ರಸ್ಟ್‌ ನೆನಪಾಗುತ್ತದೆ. ಶಾಸಕರಾಗಿ, ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಕಳಂಕ ರಹಿತ ವ್ಯಕ್ತಿತ್ವ ನೆನಪಿಗೆ ಬರುತ್ತದೆ. ಮುಂದಿನ ತಲೆಮಾರಿಗೂ ಅವರ ಆದರ್ಶಗಳು ಪ್ರಭಾವ ಬೀರುತ್ತವೆ’ ಎಂದು ಹೇಳಿದರು.

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿ, ‘ಬಾಯಿಚಪಲ ಹಾಗೂ ಪ್ರಚಾರಕ್ಕಾಗಿ ಮಹನೀಯರನ್ನು ಕೆಲವರು ಟೀಕಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಾತ್ವಿಕವಾಗಿ ಭಿನ್ನಾಭಿಪ್ರಾಯ ಹಾಗೂ ವಿಮರ್ಶೆಗಳಿದ್ದರೆ ಮಾಧ್ಯಮಗಳು ವರದಿ ಪ್ರಕಟಿಸಲಿ. ಆದರೆ, ಗಾಂಧಿ ಅವರ ಭಾವಚಿತ್ರಕ್ಕೆ ಗುಂಡು ಹೊಡೆದ ಅಥವಾ ಅವರ ಬಗ್ಗೆ ಏನೂ ತಿಳಿಯದೇ ಹೇಳಿಕೆ ನೀಡಿದ್ದನ್ನೇ ಪತ್ರಿಕೆಗಳು ಪ್ರಕಟಿಸಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ’ ಎಂದು ಹೇಳಿದರು.

ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಮಾತನಾಡಿ, ‘ಮಹಾತ್ಮ ಗಾಂಧಿ ಅವರ ಹೋರಾಟದಿಂದ ದೇಶದ ಸಾಮಾನ್ಯ ವ್ಯಕ್ತಿಗೂ ಶಕ್ತಿ ಬಂದಿತ್ತು. ಯಾರನ್ನು ಹೊರಗೆ ಇಡಲಾಗಿತ್ತೋ ಅವರನ್ನೇ ಒಟ್ಟುಗೂಡಿಸಿಕೊಂಡು ಹೋರಾಟ ನಡೆಸಿದ್ದರು. ಸರಳವಾಗಿ ಬದುಕಬೇಕು ಎಂಬುದನ್ನು ಮಹಾತ್ಮ ಗಾಂಧಿ ಅವರು ತೋರಿಸಿಕೊಟ್ಟಿದ್ದಾರೆ. ಯಾರೇ ತಮ್ಮ ಬಗ್ಗೆ ಟೀಕೆ ಮಾಡಿದ್ದರೂ ಕ್ಷಮಿಸುತ್ತಿದ್ದರು’ ಎಂದು ತಿಳಿಸಿದರು.

‘ಇಡೀ ಪ್ರಪಂಚಕ್ಕೆ ಇಂದು ಗಾಂಧಿ ತತ್ವಗಳು ಅಗತ್ಯವಿದೆ. ಪರಿಸರ ಹಾಗೂ ಸಂಸ್ಕೃತಿ ಹಾಳು ಮಾಡಬಾರದೆಂದು ಗಾಂಧಿ ಅವರು ಅಂದೇ ಕರೆ ನೀಡಿದ್ದರು’ ಎಂದು ಸ್ಮರಿಸಿದರು.

ಲೋಕ ಶಿಕ್ಷಣ ಟ್ರಸ್ಟ್‌ ಧರ್ಮದರ್ಶಿ ಅಶೋಕ ಹಾರನಹಳ್ಳಿ ಮಾತನಾಡಿ, ‘ಕೆಲವರಿಗೆ ಮಹಾತ್ಮ ಗಾಂಧಿ ಅವರನ್ನು ಟೀಕಿಸುವುದೇ ಹವ್ಯಾಸವಾಗಿದೆ. ಸಾಮಾಜಿಕ ಮಾಧ್ಯಮದ ಯುಗದಲ್ಲಿ ಸರಿ–ತಪ್ಪುಗಳ ವಿಮರ್ಶೆ ನಡೆಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ‘ವರ್ತಮಾನದಲ್ಲಿ ಮಹಾತ್ಮ ಗಾಂಧಿ ಜೀವನ ಹಾಗೂ ವೈಚಾರಿಕತೆಯ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌.ಸುರೇಶ್‌, ಶಾಸಕ ಸಿ.ಕೆ.ರಾಮಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.