ADVERTISEMENT

ಬೆಂಗಳೂರಲ್ಲಿ ಹಸಿ ಕರಗದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 16:07 IST
Last Updated 22 ಏಪ್ರಿಲ್ 2024, 16:07 IST
ಹಸಿ ಕರಗ ಹೊತ್ತು ಸಾಗಿದ ಕರಗದ ಪೂಜಾರಿ ಎ. ಜ್ಞಾನೇಂದ್ರ
ಹಸಿ ಕರಗ ಹೊತ್ತು ಸಾಗಿದ ಕರಗದ ಪೂಜಾರಿ ಎ. ಜ್ಞಾನೇಂದ್ರ   

ಬೆಂಗಳೂರು: ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಭಾನುವಾರ ತಡರಾತ್ರಿಯಿಂದ ಹಸಿ ಕರಗದ ಪೂಜಾವಿಧಾನಗಳು ನಡೆದವು. ಸೋಮವಾರ ನಸುಕಿನಲ್ಲಿ ಹಸಿ ಕರಗ ಮೆರವಣಿಗೆ ಮೂಲಕ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ತಲುಪಿತು.

ಸಂಪ್ರದಾಯದ ಪ್ರಕಾರ, ಧಾರ್ಮಿಕ ಆಚರಣೆಗಳು ಸಂಪಂಗಿ ಕೆರೆಯಲ್ಲಿರುವ ಶಕ್ತಿಪೀಠದಲ್ಲಿ ವಿಜೃಂಭಣೆಯೊಂದಿಗೆ ನಡೆದವು. ಭಾನುವಾರ ಬೆಳಿಗ್ಗೆಯಿಂದಲೇ ಸಿದ್ಧತೆಗಳು ನಡೆದು, ಸಂಜೆಯಿಂದಲೇ ವೀರಕುಮಾರರು ಆಗಮಿಸಿದ್ದರು. ಭಾನುವಾರ ತಡರಾತ್ರಿ ಪೂಜೆಗಳು ಆರಂಭವಾಗಿ, ಮುಂಜಾನೆ ಹಸಿ ಕರಗ ಸಿದ್ಧಗೊಂಡಿತು.

ವಿಶೇಷ ಪೂಜೆಯ ನಂತರ, ಹೂವಿನ ವೇಷಭೂಷಣದೊಂದಿಗೆ ಸಿದ್ಧರಾದ ಅರ್ಚಕ ಎ. ಜ್ಞಾನೇಶ್‌ ಒಂದು ಕೈಯಲ್ಲಿ ಕತ್ತಿ ಹಿಡಿದು, ಸೊಂಟದಲ್ಲಿ ಹಸಿ ಕರಗವನ್ನು ಹೊತ್ತು ಸಾಗಿದರು. ಸಂಪಂಗಿ ಕೆರೆಯ ನಂತರ ಹಡ್ಸನ್‌ ವೃತ್ತದತ್ತ ಸಾಗಿ ಬಿಬಿಎಂಪಿಯಲ್ಲಿರುವ ಆದಿಶಕ್ತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತು. ನಂತರ, ಧರ್ಮರಾಯಸ್ವಾಮಿ ದೇವಸ್ಥಾನವನ್ನು ತಲುಪಿತು.

ADVERTISEMENT

ಮಂಗಳವಾರ ರಾತ್ರಿ ಹೂವಿನ ಕರಗ: ಪ್ರಸಿದ್ಧ ದ್ರೌಪದಿದೇವಿ ಕರಗ ಶಕ್ತೋತ್ಸವ ಮಂಗಳವಾರ ತಡರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡಲಿದೆ. ಗಣಪತಿ ಮತ್ತು ಮುತ್ಯಾಲಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ,  ಹಲಸೂರು ಪೇಟೆಯ ಆಂಜನೇಯಸ್ವಾಮಿ,  ರಾಮ ದೇವಾಲಯ, ನಗರ್ತಪೇಟೆ,  ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಲಿದೆ. ಮಸ್ತಾನ್ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸಂಪಂಗಿ ಕೆರೆಯಿಂದ ಧರ್ಮರಾಯಸ್ವಾಮಿ ದೇವಸ್ಥಾನದವರೆಗೆ ಸೋಮವಾರ ಮುಂಜಾನೆ ಸಾಗಿದ ಹಸಿ ಕರಗದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೀರಕುಮಾರರು

ಕರಗ ಉತ್ಸವ: ವಾಹನ ಸಂಚಾರ ನಿರ್ಬಂಧ

ಕರಗ ಉತ್ಸವ ನಿಮಿತ್ತ ನಗರದ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ವಾಹನ ಸಂಚಾರಕ್ಕೆ ಸಂಚಾರ ಪೊಲೀಸರು ವ್ಯವಸ್ಥೆ ಕಲ್ಪಿಸಿದ್ದಾರೆ.

‘ಏಪ್ರಿಲ್ 23 ಹಾಗೂ 24ರಂದು ಉತ್ಸವ ನಡೆಯಲಿದೆ. ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವುದರಿಂದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ನಿರ್ಬಂಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ಸಂಚಾರ ನಿರ್ಬಂಧಿಸಿರುವ ರಸ್ತೆಗಳು:

* ಸಿಟಿ ಮಾರುಕಟ್ಟೆ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತದವರೆಗಿನ ಅವೆನ್ಯೂ ರಸ್ತೆ

* ಎಸ್‌.ಜೆ.ಪಿ ರಸ್ತೆಯಿಂದ ಎನ್‌.ಆರ್. ವೃತ್ತ

* ಮೆಡಿಕಲ್ ಕಾಲೇಜು ಕಡೆಯಿಂದ ಸಿಟಿ ಮಾರುಕಟ್ಟೆ ವೃತ್ತ

ವಾಹನ ನಿಲುಗಡೆ ನಿರ್ಬಂಧಿಸಿರುವ ಸ್ಥಳಗಳು: ಪಿ.ಕೆ.ಲೈನ್, ಓಟಿಸಿ ರಸ್ತೆ, ಎಸ್‌.ಪಿ ರಸ್ತೆ, ಕಬ್ಬನ್‌ ಪೇಟೆ ರಸ್ತೆ, ಸುಣ್ಣಕಲ್ ಪೇಟೆ ರಸ್ತೆ, ಮಾರುಕಟ್ಟೆ ವೃತ್ತ, ಅವೆನ್ಯೂ ರಸ್ತೆ, ಎಸ್‌.ಜೆ.ಪಿ ರಸ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.