ಬೆಂಗಳೂರು: ‘ಪೌರೋಹಿತ್ಯ ಹವ್ಯಕರ ಕಸುಬಾಗಿತ್ತು. ಅನಿವಾರ್ಯವಾಗಿ ನಾವು ಕೃಷಿ ಕಡೆ ಮುಖ ಮಾಡಿದೆವು. ಈಗ ಕೃಷಿಕನಿಗೆ ದುಡ್ಡೂ ಇಲ್ಲ, ಮದುವೆಯೂ ಇಲ್ಲ ಎಂಬಂತಾಗಿದೆ’
ಕೃಷಿಕ ರಾಧಾಕೃಷ್ಣ ಬಂದಗದ್ದೆ ಅವರು ಹವ್ಯಕರ ಸ್ಥಿತಿ–ಗತಿಯನ್ನು ಬಿಚ್ಚಿಟ್ಟಿದ್ದು ಹೀಗೆ. ‘ಈ ಸಮಸ್ಯೆಗೆ ಮಹಾಸಭೆ ಪರಿಹಾರ ಕಂಡುಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ ಭಾನುವಾರ ಅವರು ‘ಹವ್ಯಕರ ಕೃಷಿ – ಸಹಕೃಷಿ’ ಕುರಿತು ಮಾತನಾಡಿದರು.
‘ಆತ್ಮಾವಲೋಕನ ಮಾಡಿಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ನೈಸರ್ಗಿಕ ಕೃಷಿ ನಮ್ಮ ಮಾದರಿಯಾಗಬೇಕು. ಬುದ್ಧಿವಂತ ಸಮುದಾಯ ಎಂದು ಸಮಾಜದಲ್ಲಿ ಕರೆಯಿಸಿಕೊಳ್ಳುವ ನಾವು, ಇಂದು ವಿಷಬೆಳೆ ಬೆಳೆಯುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹವ್ಯಕರ ಶಿಕ್ಷಣ, ಮಾಧ್ಯಮ, ಸಂಶೋಧನೆ’ ಗೋಷ್ಠಿಯಲ್ಲಿ ಮಾತನಾಡಿದ ಶಂಕರ ಸಾರಡ್ಕ, ‘ಹವ್ಯಕರು ಇಂದು ಎಲ್ಲಾ ರಂಗದಲ್ಲೂ ಹೆಸರು ಗಳಿಸುತ್ತಿದ್ದಾರೆ. ಆದರೆ, ಆಡಳಿತಾತ್ಮಕ ಹುದ್ದೆಗಳಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಈ ಹುದ್ದೆಗಳಲ್ಲಿ ಅವರು ಹೆಚ್ಚು ತೊಡಗಿಸಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.
‘ವಿಶ್ವವಿದ್ಯಾಲಯಗಳಲ್ಲಿ ಹವ್ಯಕ ಸಂಸ್ಕೃತಿ ಪರಂಪರೆಯ ಬಗ್ಗೆ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಜೊತೆಯಲ್ಲಿ ನಮ್ಮದೇ ಮಾಲಿಕತ್ವದ ದಿನಪ್ರತಿಕೆ ಹಾಗೂ ಟಿ.ವಿ ಚಾನೆಲ್ ತೆರೆಯಬೇಕು’ ಎಂದು ಒತ್ತಾಯಿಸಿದರು.
‘ಕ್ಯಾನ್ಸರ್ ರೋಗಕ್ಕೆ ಗೋಅರ್ಕವು ಉತ್ತಮ ಔಷಧ ಎಂಬುದು ಹಲವಾರು ಬಾರಿ ಸಾಬೀತಾಗಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ ನಡೆಯಬೇಕು’ ಎಂದರು.
‘ಎರಡು ಮಕ್ಕಳು ಬೇಕೇ ಬೇಕು’
‘ನಮ್ಮಲ್ಲಿ ನ್ಯೂಕ್ಲಿಯರ್ ಫ್ಯಾಮಿಲಿ ಪದ್ಧತಿ ಬಂದು ಬಿಟ್ಟಿದೆ. ಮಕ್ಕಳು ಒಂಟಿಯಾಗಿ ಬೆಳೆಯುತ್ತಾರೆ. ಅವರಿಗೆ ಕೇವಲ ಓದು, ರ್‍ಯಾಂಕ್ ಇಷ್ಟೇ ಪ್ರಪಂಚ ಆಗಿ ಬಿಟ್ಟಿದೆ. ಹೀಗಾಗಿಯೇ ವಿಚ್ಛೇದನ ಪ್ರಕರಣಗಳೂ ನಮ್ಮ ಸಮುದಾಯದಲ್ಲಿ ಹೆಚ್ಚಿದೆ. ಆದ್ದರಿಂದ ಹವ್ಯಕ ದಂಪತಿ ಕನಿಷ್ಠ ಇಬ್ಬರು ಮಕ್ಕಳನ್ನು ಪಡೆಯಬೇಕು. ಮೂರಾದರೂ ಸಂತೋಷವೇ’ ಎಂದು ಶಂಕರಸಾರಡ್ಕ ಹೇಳಿದರು.
‘ಇದನ್ನು ಹೇಳುವ ನೈತಿಕ ಶಕ್ತಿ ಕೂಡ ನನಗಿದೆ. ಯಾಕೆಂದರೆ, ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಮೂರನೆಯದಕ್ಕೆ ನಾನು ಪ್ರಯತ್ನಿಸಿದಾಗ ನನ್ನ ಪತ್ನಿ, ‘ನೀವೇ ಹೆರುವುದಾದರೆ, ನಾನು ನೋಡಿಕೊಳ್ಳುತ್ತೇನೆ’ ಎಂದು ಕಡ್ಡಿಮುರಿದಂತೆ ಹೇಳಿಬಿಟ್ಟಳು’ ಎಂದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.