ಬೆಂಗಳೂರು: ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಭೇಟಿ ಆಗುತ್ತಿದ್ದ ನೆಂಟರು ಇಲ್ಲಿ ಒಟ್ಟಾಗಿ ಕಾಲ ಕಳೆದರು.
ವರ್ಷಾನುಗಟ್ಟಲೆ ಭೇಟಿಯೇ ಆಗದ ದೂರದ ನೆಂಟರೂ ಇಲ್ಲಿ ಪರಸ್ಪರ ಎದುರಾದರು. ಸುಖ ಕಷ್ಟ ಮಾತನಾಡುತ್ತಾ, ಹರಟುತ್ತಾ ಮೂರು ದಿನವನ್ನು ಸಂತಸದಲ್ಲಿ ಕಳೆದರು.
ಇಂತಹ ಅಪೂರ್ವ ಅವಕಾಶ ಒದಗಿಸಿದ್ದು ಇಲ್ಲಿ ನಡೆದ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ. ಹಿರಿಯರು ಗೋಷ್ಠಿಗಳಲ್ಲಿ ತಲ್ಲೀನರಾಗಿದ್ದರೆ, ಮಕ್ಕಳಂತೂ ಹೊರಗಡೆ ಆಟದಲ್ಲಿ ಮಗ್ನರಾಗಿದ್ದರು. ಬಲೂನ್‌ಗಳನ್ನು ಹಿಡಿದು, ಕುದುರೆ ಸವಾರಿ ಮಾಡಿದರು. ಅಪ್ಪ ಅಮ್ಮಂದಿರಿಗಂತೂ ಮಕ್ಕಳನ್ನು ಒಂದೆಡೆ ಕೂರಿಸಲು ಆಗದೇ ಅವರ ಹಿಂದೆ ಓಡುತ್ತಿದ್ದರು.
ಹಲವಾರು ತಳಿಯ ಗೋವುಗಳ ಪ್ರದರ್ಶನವೂ ಇಲ್ಲಿತ್ತು. ಅವುಗಳಿಗೆ ಪೂಜೆ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿತ್ತು. ಪುಟ್ಟ ಪುಟ್ಟ ಮಕ್ಕಳು ಕರುಗಳನ್ನು ಎತ್ತಿ ಮುದ್ದಾಡಿ, ಅದರೊಂದಿಗೆ ಫೋಟೊ ತೆಗೆಸಿಕೊಂಡರು.
ಪಾಕಶಾಲೆಯಂತೂ ಯಾವಾಗಲೂ ಜನರಿಂದ ತುಂಬಿತ್ತು. ಹಲಸಿನ ಹಣ್ಣಿನ ದೋಸೆ, ತೊಡದೇವು... ಹೀಗೆ ಹವ್ಯಕರ ಸಾಂಪ್ರದಾಯಿಕ ಆಹಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಸಮ್ಮೇಳನಕ್ಕೆ ಪ್ರವೇಶ ಪಡೆಯುತ್ತಿದ್ದಂತೆಯೇ ಗೊಂಬೆ ವೇಷಧಾರಿಗಳು ನಮ್ಮನ್ನು ಸ್ವಾಗತಿಸುತ್ತಿದ್ದರು. ಬಂದವರ ದಾಹ ತಣಿಸಲು ಹಾಕಲಾಗಿದ್ದ, ‘ಆಸರಿಗೆ ಕೌಂಟರ್’ ಅಂತೂ ಯಾವಾಗಲೂ ಜನರಿಂದ ತುಂಬಿರುತ್ತಿತ್ತು. ಬಂದವರಿಗೆ ಮಸಾಲೆ ಮಜ್ಜಿಗೆ, ನೀರು ಬೆಲ್ಲ ಇಡಲಾಗಿತ್ತು.ಹವ್ಯಕರ ಮೂಲ ವೃತ್ತಿ ಕೃಷಿ. ಅದಕ್ಕೆ ಸಂಬಂಧಿಸಿದ ಉಪಕರಣಗಳು, ವಿವಿಧ ತಳಿಯ ಅಡಿಕೆ, ಏಲಕ್ಕಿ ಹೀಗೆ ಹವ್ಯಕರು ಬೆಳೆಯುವ ಬೆಳೆಗಳು ಪ್ರದರ್ಶನದಲ್ಲಿದ್ದವು. ಜನರನ್ನು ಹೆಚ್ಚು ಸೆಳೆದದ್ದು, ಪುಸ್ತಕ ಪ್ರದರ್ಶನ. ಹವ್ಯಕ ಲೇಖಕರು ಬರೆದ ಸುಮಾರು 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು.
ಆಲೆಮನೆಯೇ ಆಕರ್ಷಣೆ
‘ಏ ಮಗಾ, ಇಲ್ಲಿ ನೋಡು. ನೀನು ರಸ್ತೆ ಬದಿ ಕಬ್ಬಿನ ಹಾಲು ಕುಡಿತಿದ್ಯಲಾ, ಅಲ್ಲಿ ಮೆಷಿನ್‌ನಲ್ಲಿ ಹಾಲು ತೆಗಿತ. ಆದರೆ, ಹಳ್ಳಿಬದಿಗೆ ಹಿಂಗೆ ಎಮ್ಮೆ ಕಟ್ಟಿ ಹಾಲು ತೆಗಿಯದು. ಇಲ್ಲಿ ನೋಡು ನೀನು ದೋಸಿಗೆ ಬೆಲ್ಲ ಹಾಕ್ಯಂಡು ತಿಂತ್ಯಲ. ನೋಡು ಇಲ್ಲಿ ಬೆಲ್ಲ ಹೆಂಗೆ ಮಾಡ್ತಾ ಹೇಳಿ..’
ಅಮ್ಮ ತನ್ನ ಮಗುವಿಗೆ ಆಲೆಮನೆಯನ್ನು ತೋರಿಸಿ ವಿವರಿಸುತ್ತಿದ್ದ ಈ ದೃಶ್ಯ ಕಂಡುಬಂದಿದ್ದು ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ. ಇಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗಿದ್ದು ಆಲೆಮನೆಯೇ.
‘ನಮಗೆ ನಗರದಲ್ಲಿ ಕೆಲಸ. ವರ್ಷಕ್ಕೆ ಒಂದೋ ಎರಡೋ ಬಾರಿ ಹಳ್ಳಿಗಳಿಗೆ ಭೇಟಿ ನೀಡುತ್ತೇವೆ. ಆಗೆಲ್ಲ ಆಲೆಮನೆ ಸೀಸನ್ ಆಗಿರುವುದಿಲ್ಲ. ಹಾಗಾಗಿ, ಇದನ್ನೆಲ್ಲಾ ನಮ್ಮ ಮಕ್ಕಳಿಗೆ ತೋರಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಅದು ಸಾಧ್ಯವಾಯಿತು’ ಎನ್ನುತ್ತಾರೆ ಉಷಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.