ಬೆಂಗಳೂರು: ಹವಾಲಾ ದಂಧೆಮೂಲಕ ಅಕ್ರಮವಾಗಿ ಹಣ ಬದಲಾವಣೆ ಮಾಡಿ ಸರ್ಕಾರವನ್ನು ವಂಚಿಸುತ್ತಿದ್ದ ಆರೋಪದಡಿ ಪಂಕಜ್ ಪಟೇಲ್ (47) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಉತ್ತರ ಭಾರತದ ಪಂಕಜ್, ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ. ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಮನೆಯೊಂದರಲ್ಲಿ ವಾಸವಿದ್ದ. ಆತನಿಂದ ₹28 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
'ತನ್ನ ಮನೆಯಲ್ಲೇ ಆರೋಪಿ ಹಣ ಸಂಗ್ರಹ ಮಾಡಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮನೆ ಮೇಲೆ ದಾಳಿ ಮಾಡಲಾಯಿತು. ಹಣಕ್ಕೆ ಯಾವುದೇ ದಾಖಲೆಗಳನ್ನು ಆರೋಪಿ ನೀಡಲಿಲ್ಲ. ಹೀಗಾಗಿ, ಹಣವನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.
'ನಗರದ ಕೆಲ ವ್ಯಾಪಾರಿಗಳು, ಸರ್ಕಾರಕ್ಕೆ ತೆರಿಗೆ ಪಾವತಿ ಮಾಡದೇ ವಂಚಿಸಿದ್ದಾರೆ. ಅದೇ ಕಪ್ಪು ಹಣವನ್ನು ಬದಲಾವಣೆ ಮಾಡಿಕೊಡುವಂತೆ ಪಂಕಜ್‌ಗೆ ನೀಡಿದ್ದರು. ಆತ, ಹವಾಲಾ ದಂಧೆ ಮೂಲಕ ಹಣ ವರ್ಗಾವಣೆ ಮಾಡಿಕೊಡುತ್ತಿದ್ದ. ಈ ದಂಧೆಯಲ್ಲಿ ಮತ್ತಷ್ಟು ಮಂದಿ ಶಾಮೀಲಾಗಿರುವ ಮಾಹಿತಿ ಇದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.